ಮ್ಯಾಂಚೆಸ್ಟರ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ರನ್ ಬರ ಮುಂದುವರೆದಿದೆ. ಇದೀಗ ಅವರು ಮತ್ತೊಂದು ಕೆಟ್ಟ ದಾಖಲೆಯ ಸಮೀಪದಲ್ಲಿದ್ದಾರೆ. ಆ ದಾಖಲೆಯಿಂದ ಪಾರಾಗಲು ಇಂದು ಇಂಗ್ಲೆಂಡ್ ವಿರುದ್ಧ ನಡೆಯುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವು ಕೊಹ್ಲಿಗೆ ಕೊನೆಯ ಅವಕಾಶವಾಗಿದೆ.
ನವೆಂಬರ್ 23, 2019ರಂದು, ಕೊಹ್ಲಿ ಕಡೆಯ ಬಾರಿಗೆ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಕೊಹ್ಲಿ ಬ್ಯಾಟ್ನಿಂದ 70ನೇ ಅಂತಾರಾಷ್ಟ್ರೀಯ ಶತಕ (136 ರನ್) ಮೂಡಿಬಂದಿತ್ತು. ಅಂದಿನಿಂದ, ಕೊಹ್ಲಿ ಮೂರು ಮಾದರಿ ಕ್ರಿಕೆಟ್ನಲ್ಲೂ 2,537 ರನ್ ಗಳಿಸಿದ್ದಾರೆ. 24 ಅರ್ಧಶತಕ ಬಾರಿಸಿದ್ದರೂ ಕೂಡ ಮೂರಂಕಿ ಮೊತ್ತ ತಲುಪುವಲ್ಲಿ ವಿಫಲರಾಗಿದ್ದಾರೆ.
ವೃತ್ತಿಜೀವನದ ಆರಂಭದ ದಿನಗಳಿಂದಲೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ನಿಂದ ರನ್ ಮಷಿನ್ ಎಂದೇ ವ್ಯಾಖ್ಯಾನಿಸಲ್ಪಡುತ್ತಿದ್ದರು. ಶತಕ ಗಳಿಸುವ ಸರಾಸರಿಯಿಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ನೂರು ಶತಕಗಳ ದಾಖಲೆ ಮುರಿಯಲಿದ್ದಾರೆ ಎಂಬ ನಿರೀಕ್ಷೆ ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ 2019ರ ಬಳಿಕ ದಿಢೀರ್ ಬ್ಯಾಟಿಂಗ್ ವೈಫಲ್ಯದತ್ತ ಮುಖಮಾಡಿದ ಕೊಹ್ಲಿ, ಕಳೆದ 77 ಇನ್ನಿಂಗ್ಸ್‌ಗಳಿಂದ ಶತಕ ಗಳಿಸಿಲ್ಲ. ಅಲ್ಲದೆ, ವಿರಾಟ್ ಶತಕದ ಸಂಭ್ರಮ ಕಂಡು 964 ದಿನಗಳೇ ಕಳೆದುಹೋಗಿವೆ.
ಹೀಗಾಗಿ ಕೊಹ್ಲಿ ಶತಕದ ಬರ 1,000 ದಿನಗಳ ಅಂಚಿಗೆ ತಲುಪುತ್ತಿದೆ. ಒಂದು ವೇಳೆ ವಿರಾಟ್ ಇಂದೂ ಕೂಡ ಶತಕ ಗಳಿಸದಿದ್ದರೆ ಅವರು ಮೂರಂಕಿ ಮೊತ್ತ ಗಳಿಸದೇ ಸಾವಿರ ದಿನ ಕಳೆದ ಕೆಟ್ಟ ದಾಖಲೆಗೆ ಸೇರಲಿದ್ದಾರೆ. ಯಾಕೆಂದರೆ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ತಂಡದಿಂದ ಕೊಹ್ಲಿ ಹೊರಗುಳಿದಿದ್ದಾರೆ. ಜುಲೈ 22ರಿಂದ ಪ್ರಾರಂಭವಾಗುವ ಈ ಸರಣಿಗಳು ಆಗಸ್ಟ್ 8ರಂದು ಕೊನೆಗೊಳ್ಳಲಿವೆ. ತದನಂತರ ಏಷ್ಯಾ ಕಪ್ ಪಂದ್ಯಾವಳಿ ಇದ್ದು, ಅದಕ್ಕಿನ್ನೂ ತಂಡ ಪ್ರಕಟಗೊಂಡಿಲ್ಲ, ದಿನಾಂಕವನ್ನೂ ಇನ್ನೂ ನಿಗದಿಪಡಿಸಿಲ್ಲ. ಶತಕಗಳಿಲ್ಲದ ಸಹಸ್ರ ದಿನಗಳು ಎಂಬ ಕೆಟ್ಟ ಹಣೆಪಟ್ಟಿಯಿಂದ ಪಾರಾಗಲು ಇಂದಿನ ಪಂದ್ಯವೇ ಅಂತಿಮ ಎನ್ನಲಾಗುತ್ತಿದ್ದು, ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಿಂಗಾಪುರ ಓಪನ್: ಚೀನಾದ ವಾಂಗ್ ಸೋಲಿಸಿದ ಪಿ.ವಿ.ಸಿಂಧು ಚಾಂಪಿಯನ್