ನವದೆಹಲಿ: ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ಪ್ರೇಮಿಗಳು ಮತ್ತು ತಜ್ಞರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ದಯನೀಯವಾಗಿ ವಿಫಲರಾಗಿದ್ದರು. ಎರಡು ಪಂದ್ಯಗಳಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ವಿರಾಟ್ ಬದಲಿಗೆ ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಈಗಾಗಲೇ ಸಲಹೆ ನೀಡಿದ್ದಾರೆ. ಈ ನಡುವೆ ವಿರಾಟ್ ಕಳಪೆ ಫಾರ್ಮ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
"ಈಗ ವಿರಾಟ್ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರು ಉತ್ತಮ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯ ಆಟ ನೋಡಿದಾಗ ಸಾಮರ್ಥ್ಯ ತಿಳಿಯುತ್ತದೆ. ಕಳೆದ 12-13 ವರ್ಷಗಳಿಂದ ಆಡುತ್ತಿರುವಂತೆ ಉತ್ತಮವಾದ ರೀತಿಯಲ್ಲಿ ಯಶಸ್ವಿಯಾಗುವ ಮಾರ್ಗವನ್ನು ಅವರು ಕಂಡುಕೊಳ್ಳಬೇಕು." ಎಂದು ಗಂಗೂಲಿ ಹೇಳಿದರು.
ಇದನ್ನೂ ಓದಿ: ಗಾಯದಿಂದ ಚೇತರಿಸಿಕೊಳ್ಳದ ವಿರಾಟ್.. 2ನೇ ಏಕದಿನ ಪಂದ್ಯಕ್ಕೂ ಬಹುತೇಕ ಅನುಮಾನ
ಇದೇ ಪರಿಸ್ಥಿತಿ ನನಗೂ ಎದುರಾಗಿತ್ತು: ತಂಡದಲ್ಲಿ ಕೊಹ್ಲಿ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ, "ಇಂತಹ ಸನ್ನಿವೇಶವನ್ನು ನಾನು, ಸಚಿನ್, ರಾಹುಲ್ ಕೂಡಾ ಎದುರಿಸಿದ್ದೇವೆ. ಭವಿಷ್ಯದ ಆಟಗಾರರಿಗೂ ಇಂಥ ಸವಾಲುಗಳು ಸಹಜ. ಇದು ಆಟದ ಭಾಗ ಮತ್ತು ಮೈದಾನದಲ್ಲಿ ಆಟಗಾರನಾಗಿ ನಾವು ನಮ್ಮ ಆಟವನ್ನಷ್ಟೇ ಆಡಬೇಕು" ಎಂದು ಗಂಗೂಲಿ ಸಲಹೆ ನೀಡಿದರು.
ಗಂಗೂಲಿಗೆ ಬ್ರಿಟನ್ ಸಂಸತ್ತಿನ ಗೌರವ: ಬ್ರಿಟನ್ ಸಂಸತ್ತಿನ ಗೌರವಕ್ಕೆ ಪಾತ್ರರಾದ ಬಗ್ಗೆ ಮಾತನಾಡಿ, "ಬ್ರಿಟಿಷ್ ಸಂಸತ್ತು ನನ್ನನ್ನು ಬಂಗಾಳಿ ಎಂದು ಗೌರವಿಸಿದೆ. ಇದೊಂದು ಉತ್ತಮ ಭಾವನೆ. ಆರು ತಿಂಗಳ ಹಿಂದೆ ಅವರು ನನ್ನನ್ನು ಸಂಪರ್ಕಿಸಿದ್ದರು. ಪ್ರತಿ ವರ್ಷ ಈ ಪ್ರಶಸ್ತಿಯನ್ನು ಅವರು ನೀಡುತ್ತಾರೆ" ಎಂದರು.