ನವದೆಹಲಿ: ಭಾರತ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಇರುವ ವೈಮನಸ್ಸಿನಿಂದಾಗಿ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು ಎಂದು ತಾವು ಬರೆದ ಪುಸ್ತಕದಲ್ಲಿ ನಮೂದಿಸಿ ಚರ್ಚೆಗೆ ಗ್ರಾಸವಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಸಿಒಎ (ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಮುಖ್ಯಸ್ಥ) ವಿನೋದ್ ರಾಯ್ ವಿನೋದ್ ರೈ ತಮ್ಮ ಪುಸ್ತಕವನ್ನು ಸಮರ್ಥಿಸಿಕೊಂಡಿದ್ದಾರೆ.
ವಿನೋದ್ ರೈ ಅವರು ಬರೆದ 'ನಾಟ್ ಜಸ್ಟ್ ಎ ನೈಟ್ ವಾಚ್‌ಮ್ಯಾನ್: ಮೈ ಇನ್ನಿಂಗ್ಸ್ ಇನ್ ದಿ ಬಿಸಿಸಿಐ' ಎಂಬ ಪುಸ್ತಕದಲ್ಲಿ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಅವರ ಬಗ್ಗೆ ಪ್ರಸ್ತಾಪವಾಗಿದ್ದು, ಅದರಲ್ಲಿ ಕುಂಬ್ಳೆ ಅವರ ಅತಿಯಾದ ಶಿಸ್ತಿನಿಂದಾಗಿ ವಿರಾಟ್ ಬೇಸರಗೊಂಡಿದ್ದರು. ಇದು ಇಬ್ಬರ ಮಧ್ಯೆ ಅಂತರ ಮೂಡಿಸಿತ್ತು ಎಂದು ಬರೆದಿರುವುದು ಕ್ರಿಕೆಟ್ ಅಂಗಳದಲ್ಲಿ ಚರ್ಚೆ ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಿರುವ ವಿನೋದ್ ರೈ, ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದಾಗ ಅವರ ಕಠಿಣ ಶಿಸ್ತು ತಂಡದ ಜೂನಿಯರ್ ಆಟಗಾರರಲ್ಲಿ ಭಯ ಮೂಡಿಸಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದರು. ಅದನ್ನೇ ನಾನು ಪುಸ್ತಕದಲ್ಲಿ ದಾಖಲಿಸಿದ್ದೇನೆ. ಕುಂಬ್ಳೆ ಮತ್ತು ವಿರಾಟ್ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎಂದು ನಾನೆಲ್ಲೂ ಬರೆದಿಲ್ಲ ಎಂದಿದ್ದಾರೆ.
ಅನಿಲ್ ಕುಂಬ್ಳೆ ಅವರ ಕೋಚ್ ಹುದ್ದೆಯ ಒಪ್ಪಂದವನ್ನು ನವೀಕರಿಸಬೇಕಾದ ನಾವು ತಂಡದ ಸದಸ್ಯರನ್ನು ಸಂಪರ್ಕಿಸಿದ್ದೆವು. ಆಗ ವಿರಾಟ್ ಕೊಹ್ಲಿ ಕುಂಬ್ಳೆ ಅವರ ಶಿಸ್ತಿನ ಬಗ್ಗೆ ಪ್ರಸ್ತಾಪಿಸಿದ್ದರು. ಇಬ್ಬರ ಮಧ್ಯೆ ಯಾವುದೇ ಭಿನ್ನಮತ ಇರಲಿಲ್ಲ. ಈ ಬಗ್ಗೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ, ನಾನು ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಕುಡಿದ ನಶೆಯಲ್ಲಿದ್ದ ಆಟಗಾರನೋರ್ವ ನನ್ನನ್ನು ಬಾಲ್ಕನಿಯಿಂದ ನೇತಾಡಿಸಿದ್ದ': ಕ್ರಿಕೆಟಿಗ ಚಹಲ್