ನವದೆಹಲಿ: ಉನ್ಮುಖ್ತ್ ಚಾಂದ್. ಭಾರತಕ್ಕೆ 2012ರ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟ ನಾಯಕ. ಆ ಸಮಯದಲ್ಲಿ ಅವರನ್ನು 'ಭಾರತದ ಭವಿಷ್ಯ' ಎಂದೇ ಬಿಂಬಿಸಲಾಗಿತ್ತು. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರಂತೆ 19 ವರ್ಷದೊಳಗಿನ ವಿಶ್ವಕಪ್ ಗೆದ್ದ ನಂತರ ಚಾಂದ್ ಕೂಡ ಭಾರತ ತಂಡದಲ್ಲಿಯೇ ಯಶಸ್ವಿ ಕ್ರಿಕೆಟಿಗನಾಗಬಹುದು ಎಂದು ಹೇಳಲಾಗಿತ್ತು. ಆದರೆ, ಅವರಿಗೆ ಅದೃಷ್ಟ ಕೂಡಿಬರಲಿಲ್ಲ.
2008ರ ಕಿರಿಯರ ವಿಶ್ವಕಪ್ ಗೆದ್ದ ಕೂಡಲೇ ವಿರಾಟ್ ಕೊಹ್ಲಿ ಭಾರತ ತಂಡದ ಭಾಗವಾದರು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದುನಿಂತಿದ್ದಾರೆ. ಅದೇ ನಾಲ್ಕು ವರ್ಷಗಳ ನಂತರ ಉನ್ಮುಖ್ತ್ ಚಾಂದ್ ಕೂಡ ಭಾರತಕ್ಕೆ 3ನೇ ಕಿರಿಯರ ವಿಶ್ವಕಪ್ ಗೆದ್ದುಕೊಟ್ಟರು. ಆದರೆ, ಆ ನಂತರ ಅವರು ರಣಜಿ, ಐಪಿಎಲ್ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರಾದರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.
ಕೊನೆಗೆ ಐಪಿಎಲ್, ದೆಹಲಿ ರಣಜಿ ತಂಡದಿಂದಲೂ ಹೊರಬಿದ್ದರು. ಉತ್ತರಾಖಂಡ ರಣಜಿ ತಂಡದಲ್ಲಿ ಒಂದಷ್ಟು ದಿನ ಆಡಿದ ಚಾಂದ್, ಕೊನೆಗೆ ಭಾರತ ತಂಡದಲ್ಲಿ ಆಡುವ ಅವಕಾಶವಿಲ್ಲ, ತಮ್ಮ ಕ್ರಿಕೆಟ್ ಭವಿಷ್ಯವನ್ನು ಅಂತ್ಯಗೊಳಿಸುವ ಬದಲು ಅವಕಾಶ ಇರುವ ಕಡೆಗೆ ಪಯಣಿಸುವ ನಿರ್ಧಾರ ತೆಗೆದುಕೊಂಡರು. ಈ ಕಾರಣಕ್ಕೆ ತಮ್ಮ 28ನೇ ವಯಸ್ಸಿಗೆ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣುಬಿಡುತ್ತಿರುವ ಅಮೆರಿಕಕ್ಕೆ ಅವಕಾಶಕ್ಕಾಗಿ ವಲಸೆ ಹೋಗಿರುವ ಚಾಂದ್, ಈಗಾಗಲೆ ಅಲ್ಲಿನ ಸ್ಥಳೀಯ ಮೈನರ್ ಕ್ರಿಕೆಟ್ ಲೀಗ್ನಲ್ಲಿ ಆಡುತ್ತಿದ್ದಾರೆ.
ಅಮೆರಿಕಗೆ ವಿಶ್ವಕಪ್ ಆತಿಥ್ಯ; ಚಾಂದ್ಗೆ ಅವಕಾಶ? ಸೋಮವಾರ ಐಸಿಸಿ 2024ರ ಟಿ20 ವಿಶ್ವಕಪ್ ಆತಿಥ್ಯ ವಹಿಸುವ ರಾಷ್ಟ್ರಗಳನ್ನು ಹೆಸರಿಸಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್ ಕ್ರಿಕೆಟ್ ಮಂಡಳಿಗಳಿಗೆ ಈ ಬಹುರಾಷ್ಟ್ರಗಳ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. ಐಸಿಸಿ ನಿಯಮಗಳ ಪ್ರಕಾರ, ಟೂರ್ನಿ ಆಯೋಜಿಸುವ ತಂಡಗಳು ನೇರ ಅರ್ಹತೆ ಪಡೆದುಕೊಳ್ಳುತ್ತವೆ. ಹಾಗಾಗಿ, ವಿಂಡೀಸ್ ಮತ್ತು ಯುಎಸ್ಎ ತಂಡಗಳು ವಿಶ್ವಕಪ್ ಭಾಗವಾಗಲಿದ್ದು, ಭಾರತ ಬಿಟ್ಟು ಅಮೆರಿಕಗೆ ತೆರಳಿರುವ ಉನ್ಮುಖ್ತ್ ಚಾಂದ್ 2024ಕ್ಕೆ ಅಮೆರಿಕ ಪರ ಆಡುವ ಸಾಧ್ಯತೆಯಿದೆ.
ಅಮೆರಿಕದಲ್ಲಿ 3 ವರ್ಷಗಳ ಕಾಲ ನೆಲೆಸಿದ ನಂತರ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ಅರ್ಹತೆ ಪಡೆಯಲಿದ್ದಾರೆ. ಇವರ ಜೊತೆ, ಅವರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಸ್ಮಿತ್ ಪಟೇಲ್, ಹರ್ಮೀತ್ ಸಿಂಗ್ ಕೂಡ ಯುಎಸ್ಎಗೆ ಸ್ಥಳಾಂತರಗೊಂಡಿದ್ದಾರೆ. ಯುಎಸ್ ತಂಡದಲ್ಲಿ ಕೇವಲ ಭಾರತೀಯ ಆಟಗಾರರು ಮಾತ್ರವಲ್ಲ, ಕಿವೀಸ್ ಆಲ್ರೌಂಡರ್ ಕೋರಿ ಆ್ಯಂಡರ್ಸನ್, ಪಾಕಿಸ್ತಾನ ಮತ್ತು ಶ್ರೀಲಂಕಾದ ಕೆಲವು ಆಟಗಾರರು ಕೂಡ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಲು ಕಾಯುತ್ತಿದ್ದಾರೆ.
ಇದನ್ನೂ ಓದಿ;ಕೊಹ್ಲಿ ಟಿ20 ಕ್ರಿಕೆಟ್ಗೆ ತಕ್ಕಂತೆ ಪವರ್ಫುಲ್ ಶಾಟ್ ಆಡುವ ಪವರ್ ಕಳ್ಕೊಂಡಿದ್ದಾರೆ : ಸಂಜಯ್ ಮಂಜ್ರೇಕರ್