ನವದೆಹಲಿ: ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಗಿದ ಮೇಲೆ ಒಂದು ತಿಂಗಳ ವಿರಾಮದ ನಂತರ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಕೆಲ ಹಿರಿಯ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ ಹಾಗೇ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಆಯ್ಕೆ ಸಮಿತಿಯ ಈ ನಿರ್ಧಾರ ಭಾರಿ ವಿಮರ್ಶೆ ಮತ್ತು ಟೀಕೆಗೆ ಗುರಿಯಾಗುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲನುಭವಿಸಿತು. ಎರಡನೇ ಬಾರಿಗೆ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿದ್ದ ಭಾರತದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಜಿಂಕ್ಯಾ ರಹಾನೆ ಒಬ್ಬರನ್ನು ಬಿಟ್ಟು ಮಿಕ್ಕ ಆಟಗಾರು ರನ್ ಗಳಿಸುವಲ್ಲಿ ಪರದಾಡಿದ್ದರು. ರೆಹಾನೆ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಉಪನಾಯಕರನ್ನಾಗಿ ಮಾಡಿದ್ದು, ಅನುಭವಿ ಪೂಜಾರ ಅವರನ್ನು ಕೈ ಬಿಡಲಾಗಿದೆ. ಅಲ್ಲದೇ ಬೌಲರ್ಗಳಾದ ಶಮಿ ಮತ್ತು ಉಮೇಶ್ ಯಾದವ್ ಅವರನ್ನೂ ಕೂರಿಸಲಾಗಿದೆ.
ಮೂವರು ಆಟಗಾರರ ಕೆರಿಯರ್ ಮುಗಿಯಿತೇ?: 35 ವರ್ಷ ವಯಸ್ಸಿನ ಉಮೇಶ್ ಯಾದವ್ ಮತ್ತು ಚೇತೇಶ್ವರ ಪೂಜಾರ ಅವರ ವೃತ್ತಿ ಜೀವನ ಮುಗಿಯಿತೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇನ್ನು 32 ವರ್ಷದ ಶಮಿ ಅವರನ್ನೂ ಸಹ ಕಡಗಣನೆ ಮಾಡಲಾಗುತ್ತಿದೆಯೇ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಮಾಧ್ಯಮವೊಂದರ ವರದಿ ಪ್ರಕಾರ ಉಮೇಶ್ ಯಾದವ್ ಅವರು ಗಾಯದಿಂದ ಬಳಲುತ್ತಿರುವ ಕಾರಣ ಅವರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.
"ಡಬ್ಲ್ಯುಟಿಸಿ ಫೈನಲ್‌ಗೆ ಮೊದಲು 15 ತಿಂಗಳ ಕಾಲ ಹೊರಗುಳಿದ ನಂತರ ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಮಾಡಿದರೆ, ಯಾರಾದರೂ ಪುನರಾಗಮನ ಮಾಡಬಹುದು. ಯಾವುದೇ ಹಿರಿಯ ಆಟಗಾರನ ಬಾಗಿಲು ಮುಚ್ಚಿಲ್ಲ" ಎಂದು ಬಿಸಿಸಿಐನ ಮೂಲಗಳು ಮಾಹಿತಿ ನೀಡಿದೆ ಎಂದಿದೆ. ಹೀಗಾಗಿ 57 ಟೆಸ್ಟ್‌ಗಳಲ್ಲಿ 170 ವಿಕೆಟ್‌ಗಳನ್ನು ಪಡೆದಿರುವ ಉಮೇಶ್ ಯಾದವ್ ಮತ್ತು ಟೆಸ್ಟ್ ತಂಡದಿಂದ ಹೊರಗುಳಿದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರಿಗೆ ಬಾಗಿಲು ಮುಚ್ಚಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.
ಆದರೆ, ಪೂಜಾರಾ ಫಾರ್ಮ್ ಕಳೆದುಕೊಂಡಿಲ್ಲ. ಅವರು ಇಂಗ್ಲೆಂಡ್ ಪಿಚ್ನಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮಾತ್ರ ವೈಫಲ್ಯ ಕಂಡಿದ್ದರು. ಅವರನ್ನು ತಂಡಕ್ಕೆ ಆಯ್ಕೆ ಮಾಡದಿರಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅತ್ತ ಪೂಜಾರ ಮತ್ತು ಟಿ 20 ಅಗ್ರ ಶ್ರೇಯಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ದುಲೀಪ್ ಟ್ರೋಫಿ ಆಡಲು ಮುಂದಾಗಿದ್ದಾರೆ.
ಇದನ್ನೂ ಓದಿ: Sachin Tendulkar: ಗಾಲ್ಫ್ ಮೈದಾನದಲ್ಲಿ ದಿಗ್ಗಜರ ಸಮಾಗಮ.. ಗ್ಯಾರಿ ಪ್ಲೇಯರ್ ಜೊತೆಗಿನ ಫೋಟೋ ಹಂಚಿಕೊಂಡ ತೆಂಡೂಲ್ಕರ್