ಆಂಟಿಗುವಾ: ಟೀಂ ಇಂಡಿಯಾದ ಕಿರಿಯರ ತಂಡವು 5ನೇ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡವು ಭಾರತದ ರವಿಕುಮಾರ್ ಮತ್ತು ರಾಜ್ ಭಾವಾ ಅಮೋಘ ಬೌಲಿಂಗ್ ದಾಳಿಗೆ ತತ್ತರಿಸಿ 189 ರನ್ಗಳ ಸಾಧಾರಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಯಶ್ ಧುಲ್ ಟೀಂ 47.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಆರಂಭಿಕರಾಗಿ ಆಗಮಿಸಿದ್ದ ಅಂಗ್ಕೃಶ್ ರಘುವಂಶಿ ಸೊನ್ನೆ ಸುತ್ತಿ ಔಟಾದರು. ಇನ್ನು ಹರ್ನೂರ್ ಸಿಂಗ್ ಜೊತೆಯಾದ ಶೇಖ್ ರಶೀದ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ತಂಡದ ಮೊತ್ತ 49 ರನ್ ಆಗಿದ್ದಾಗ ಹರ್ನೂರ್ ಸಿಂಗ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಯಶ್ ಧುಲ್, ಶೇಖ್ ರಶೀದ್ಗೆ ಸಾಥ್ ನೀಡಿದರು.
ಉತ್ತಮವಾಗಿ ಆಡುತ್ತಿದ್ದ ಶೇಖ್ ರಶೀದ್ (50) ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ ಯಶ್ ಧುಲ್ (17) ಕೂಡ ಔಟಾದರು. ಆಗ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 97 ರನ್ ಆಗಿತ್ತು. ಬಳಿಕ ಕ್ರೀಸ್ಗೆ ಬಂದ ನಿಶಾಂತ್ ಸಿಧು ಮತ್ತು ರಾಜ್ ಬಾವಾ ತಂಡವನ್ನು ನಿಧಾನವಾಗಿ ಗೆಲುವಿನ ಗುರಿಯತ್ತ ಸಾಗಿಸಿದರು.
ನಿಶಾಂತ್ ಸಿಂಧು - ರಾಜ್ ಬಾವಾ ಉತ್ತಮ ಜೊತೆಯಾಟ:
ತಂಡದ ಮೊತ್ತ 164 ರನ್ ಆಗಿದ್ದಾಗ ರಾಜ್ ಬಾವಾ (35) ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕೌಶಾಲ್ ತಾಂಬೆ 1 ರನ್ ಗಳಿಸಿ ಔಟಾದರು. ನಿಶಾಂತ್ ಸಿಧು 50 ರನ್ ಗಳಿಸಿದ್ರೆ, ಕೊನೆಯಲ್ಲಿ ಕ್ರೀಸ್ಗೆ ಬಂದ ದಿನೇಶ್ ಬಾನಾ 5 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 13 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇಂಗ್ಲೆಂಡ್ ಪರ ಜೋಶುವಾ ಬೋಡೆನ್, ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್‌ವಾಲ್ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ U19 ತಂಡ ಜೇಮ್ಸ್ ರಿವ್ ಅವರ 95 ರನ್ಗಳ ಹೊರತಾಗಿಯೂ 44.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು. ರಿವ್ 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95 ರನ್ಗಳಿಸಿದರೆ, ಉಳಿದೆಲ್ಲಾ ಬ್ಯಾಟರ್ಗಳು ಕೇವಲ 94 ರನ್ಗಳಿಸಿದರು.
ಇಂಗ್ಲೆಂಡ್ ಪರ ಆರಂಭಿರಾಗಿ ಕಣಕ್ಕಿಳಿದಿದ್ದ ಸ್ಫೋಟಕ ಬ್ಯಾಟರ್ ಜಾಕೋಬ್ ಬೆತೆಲ್(2) ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ನಾಯಕ ಟಾಮ್ ಪ್ರಿಸ್ಟ್(0)ರನ್ನು ತಂಡದ ಮೊತ್ತ 18ರನ್ಗಳಾಗುವಷ್ಟರಲ್ಲಿ ರವಿ ಕುಮಾರ್ ಪೆವಿಲಿಯನ್ಗಟ್ಟಿದರು. ನಂತರ ಬಂದ ವಿಲ್ ಲಕ್ಸ್ಟನ್(4), ಜಾರ್ಜ್ ಬೆಲ್(0),ರೆಹಾನ್ ಅಹ್ಮದ್, ಅಲೆಕ್ಸ್ ಹೊರ್ಟನ್ ತಲಾ 10 ರನ್ ನೀಡಿ ವಿಕೆಟ್ ಒಪ್ಪಿಸಿದರು. ಇದರಲ್ಲಿ 4 ವಿಕೆಟ್ ರಾಜ್ ಬಾವಾ ಪಡೆದರೆ, ಕೌಶಾಲ್ ತಾಂಬೆ ಒಂದು ವಿಕೆಟ್ ಪಡೆದಿದ್ದರು.
100 ರನ್ಗಳಿಗೆ ಆಲೌಟ್ ಆಗಬಹುದು ಎನ್ನುತ್ತಿದ್ದ ವೇಳೆ 8ನೇ ವಿಕೆಟ್ ಒಂದಾದ ಜೇಮ್ಸ್ ರಿವ್(95) ಮತ್ತು ಜೇಮ್ಸ್ ಸೇಲ್ಸ್(34) 3ನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಆದರೆ ಒಂದೇ ಓವರ್ನಲ್ಲಿ ರವಿ ಕುಮಾರ್ ರಿವ್ ಮತ್ತು ಥಾಮಸ್ ಆ್ಯಸ್ಪಿನ್ವಿಲ್ ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬೃಹತ್ ಮೊತ್ತದ ಕನಸಿಗೆ ತಣ್ಣೀರೆರಚಿದರು.
ಭಾರತದ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ವೇಗಿಗಳಾದ ರವಿಕುಮಾರ್ 34ಕ್ಕೆ 4, ರಾಜ್ ಭಾವಾ 31ಕ್ಕೆ 5 ವಿಕೆಟ್ ಪಡೆದು ಆಂಗ್ಲರನ್ನು 200ರ ಗಡಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದರು. ಕೌಶಾಲ್ ತಾಂಬೆ 29ಕ್ಕೆ 1 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ರಾಜ್ ಬಾವಾ
ಸರಣಿ ಶ್ರೇಷ್ಠ: ಡೆವಾಲ್ಡ್ ಬ್ರೇವಿಸ್
ಸಂಕ್ಷೀಪ್ತ ಸ್ಕೋರ್ ವಿವರ:
ಇಂಗ್ಲೆಂಡ್: 189 (44.5)
ಭಾರತ: 195/6 (47.4)