ದುಬೈ: 2022ರ ಅಂಡರ್ 19 ವಿಶ್ವಕಪ್ ಟೂರ್ನಿಗೆ( U19 Men’s World Cup) ವೆಸ್ಟ್ ಇಂಡೀಸ್(west indies) ಆತಿಥ್ಯವಹಿಸುವುದು ಖಚಿತವಾಗಿದೆ . 22 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 16 ತಂಡಗಳು 48 ಪಂದ್ಯಗಳನ್ನಾಡಲಿದೆ.
19 ವರ್ಷದೊಳಗಿನ ಪುರುಷರ ಕ್ರಿಕೆಟ್ ವಿಶ್ವಕಪ್ ಅತ್ಯುತ್ತಮ ಸ್ಪರ್ಧೆ ಮತ್ತು ಮನರಂಜನೆಯನ್ನು ನೀಡುವ ಜೊತೆಗೆ ಭವಿಷ್ಯದ ತಾರೆಗಳನ್ನು ಕ್ರಿಕೆಟ್ ಜಗತ್ತಿಗೆ ತೋರಿಸುವ ಒಂದು ಬೃಹತ್ ವೇದಿಕೆಯಾಗಿದೆ. ವಿರಾಟ್ ಕೊಹ್ಲಿ, ಬಾಬರ್ ಅಜಮ್, ಜೋ ರೂಟ್, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಶಿಮ್ರಾನ್ ಹೆಟ್ಮಾಯಿರ್, ಶುಬ್ಮನ್ ಗಿಲ್ ಸೇರಿದಂತೆ ಸಾಕಷ್ಟು ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇದೀಗ 2022ಕ್ಕೆ ಮತ್ತೊಂದು ಯುವ ಸಮೂಹ ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಟೂರ್ನಿಯಲ್ಲಿ ಕ್ರಿಕೆಟ್ ಜಗತ್ತಿಗೆ ಪರಿಚಯವಾಗಲಿದೆ.
ಟೂರ್ನಮೆಂಟ್ ಕೆರಿಬಿಯನ್ ರಾಷ್ಟ್ರಗಳಾದ(Caribbean countries) ಆ್ಯಂಟಿಗುವಾ ಮತ್ತು ಬಾರ್ಬುಡಾಸ್, ಗಯಾನ, ಸೇಂಟ್ ಕಿಟ್ಸ್ ಮತ್ತು ನೇವಿಸ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋಗಳಲ್ಲಿ ನಡೆಯಲಿದೆ.
ಆದರೆ ಈ ಟೂರ್ನಮೆಂಟ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಟೂರ್ನಿಯಿಂದ ಹಿಂದೆ ಸರಿದಿದೆ. ಟೂರ್ನಿ ಮುಗಿಸಿ ಹಿಂತಿರುಗಿದಾಗ ಕಠಿಣ ಕ್ವಾರಂಟೈನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾಗಿ ಸ್ಕಾಟ್ಲೆಂಡ್ ತಂಡ ಕಿವೀಸ್ ಸ್ಥಾನದಲ್ಲಿ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.
ಹಿಂದಿನ ಆವೃತ್ತಿಯಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್ ಆಗಿದ್ದ ಬಾಂಗ್ಲಾದೇಶ ಇಂಗ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆ ಎ ಗುಂಪಿನಲ್ಲಿದೆ.
ICC U19 ಪುರುಷರ ಕ್ರಿಕೆಟ್ ವಿಶ್ವಕಪ್ ಗುಂಪುಗಳು:
- ಎ ಗುಂಪು - ಬಾಂಗ್ಲಾದೇಶ, ಇಂಗ್ಲೆಂಡ್, ಕೆನಡಾ, ಯುನೈಟೆಡ್ ಅರಬ್ ಎಮಿರೇಟ್ಸ್
- ಬಿ ಗುಂಪು - ಭಾರತ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ಉಗಾಂಡಾ
- ಸಿ ಗುಂಪು - ಅಫ್ಘಾನಿಸ್ತಾನ, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಜಿಂಬಾಬ್ವೆ
- ಡಿ ಗುಂಪು - ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್
ಜನವರಿ 14 ರಿಂದ 23 ರವರೆಗೆ ಲೀಗ್ ಪಂದ್ಯಗಳು ನಡೆಯಲಿವೆ. ಜನವರಿ 26 ರಿಂದ 28ರವರೆಗೆ ಕ್ವಾರ್ಟರ್ ಫೈನಲ್ಸ್, ಫೆಬ್ರವರಿ 1 ಮತ್ತು ಫೆಬ್ರವರಿ 2ರಂದು ಸೆಮಿಫೈನಲ್ಸ್ ಹಾಗೂ ಫೆಬ್ರವರಿ 5ರಂದು ಫೈನಲ್ ಪಂದ್ಯ ನಡೆಯಲಿದೆ.
2020ರ ರನ್ನರ್ ಅಪ್ ಭಾರತ ತಂಡ ಜನವರಿ 15ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಭಾರತ ತಂಡ 2000, 2008, 2012 ಮತ್ತು 2018ರಲ್ಲಿ ಕಿರಿಯರ ವಿಶ್ವಕಪ್ ಜಯಿಸಿದೆ. ಒಟ್ಟು 13 ಬಾರಿ ವಿಶ್ವಕಪ್ ನಡೆದಿದ್ದು, ಭಾರತ 4, ಆಸ್ಟ್ರೇಲಿಯಾ 3 ಮತ್ತು ಪಾಕಿಸ್ತಾನ 2, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಇದನ್ನೂ ಓದಿ:IND vs NZ 2nd T20I: ರಾಂಚಿಯಲ್ಲಿ ಕಿವೀಸ್ ಮಣಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ