ಕೇಪ್ಟೌನ್: ಹಿರಿಯ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಅನುಭವ ಅಮೂಲ್ಯವಾದದ್ದು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ತಂಡದ ಪರಿವರ್ತನೆ ನೈಸರ್ಗಿಕವಾಗಿ ಆಗುತ್ತದೆ ಎಂದು ಹೇಳಿದ್ದಾರೆ.
ಕೇಪ್ಟೌನ್ನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಆಟಗಾರರ ಪರ ಮತ್ತೊಮ್ಮೆ ಬ್ಯಾಟ್ ಬೀಸಿದರು.
ತಂಡದಲ್ಲಿ ಮಧ್ಯಮ ಕ್ರಮಾಂಕದ ಪರಿವರ್ತನೆಗೆ ಇದು ಸರಿಯಾದ ಸಮಯವೇ? ಎಂದು ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ, ನಾವು ಅದರ ಬಗ್ಗೆ ಯಾವಾಗ ಚರ್ಚೆ ನಡೆಸುತ್ತೇವೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಪರಿವರ್ತನೆಗಳು ಸಹಜವಾಗಿ ಆಗುತ್ತವೆ. 2ನೇ ಇನ್ನಿಂಗ್ಸ್ನಲ್ಲಿ ರಹಾನೆ ಮತ್ತು ಪೂಜಾರ ಬ್ಯಾಟಿಂಗ್ ಮಾಡಿದ ರೀತಿ, ಆ ಅನುಭವ ನಮಗೆ ಅಮೂಲ್ಯವಾದದ್ದು. ವಿಶೇಷವಾಗಿ ಇಂತಹ ಸರಣಿಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ಈ ಹುಡುಗರು ಈ ಹಿಂದೆ ನಾವು ವಿದೇಶಿ ಸರಣಿಗಳನ್ನಾಡುವಾಗ ಕಠಿಣ ಸಂದರ್ಭದಲ್ಲಿ ತಂಡಕ್ಕಾಗಿ ಸಾಕಷ್ಟು ಬಾರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರು ಯಾವಾಗಲೂ ಪ್ರಭಾವಿ ಪ್ರದರ್ಶನಗಳೊಂದಿಗೆ ಹೆಜ್ಜೆ ಹಾಕುತ್ತಾರೆ. ಆಸ್ಟ್ರೇಲಿಯದಲ್ಲೂ ಅದನ್ನು ನೋಡಿದ್ದೇವೆ ಮತ್ತು ಕಳೆದ ಟೆಸ್ಟ್‌ನಲ್ಲೂ ಅವರು ಅಂಥ ತೋರಿಸಿದ್ದಾರೆ ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಪೂಜಾರ ಮತ್ತು ರಹಾನೆ ಜೋಹನ್ಸ್ ಬರ್ಗ್ನಲ್ಲಿ ತಂಡ ಸಂಕಷ್ಟದಲ್ಲಿದ್ದ ವೇಳೆ ಅರ್ಧಶತಕ ಸಿಡಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ಬ್ಯಾಟರ್ಗಳ ಅತ್ಯುತ್ತಮ ಪ್ರದರ್ಶನದಿಂದ ಇವರ ಹೋರಾಟ ವ್ಯರ್ಥವಾಗಿತ್ತು.
ಇದನ್ನೂ ಓದಿ:3ನೇ ಟೆಸ್ಟ್ಗೆ ನಾನು ಸಂಪೂರ್ಣ ಫಿಟ್, ಆದರೆ ಆತ ಆಡುವುದು ಡೌಟ್: ವಿರಾಟ್ ಕೊಹ್ಲಿ