ಅಬುಧಾಬಿ : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡರೂ ಆರ್ಸಿಬಿ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಸೋಲಿಗೆ ಪ್ರಮುಖ ಕಾರಣನಾದ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಮನಸಾರೆ ಹೊಗಳಿದ್ದರು. ಇದೀಗ ಮಾಜಿ ವೇಗಿ ಇರ್ಫಾನ್ ಪಠಾಣ್ ಮುಂಬರುವ ಟಿ20 ವಿಶ್ವಕಪ್ಗೆ ಆತ ಭಾರತದ ಪ್ರಮುಖ ಅಸ್ತ್ರ ಎಂದು ತಿಳಿಸಿದ್ದಾರೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿ ನಡೆಯುತ್ತಿದೆ. ಇದು ಮುಗಿಯುತ್ತಿದ್ದಂತೆ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹಾಗಾಗಿ, ನಿನ್ನೆಯ ಪಂದ್ಯದ ನಂತರ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಮಿಸ್ಟರಿ ಸ್ಪಿನ್ನರ್ ಚಕ್ರವರ್ತಿ ಭಾರತದ ಕೀ ಬೌಲರ್ ಆಗಲಿದ್ದಾರೆ ಎಂದು ತಿಳಿಸಿದ್ದರು.
ವರುಣ್ ಚಕ್ರವರ್ತಿ 4 ಓವರ್ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪ್ರದರ್ಶನಕ್ಕೆ ಅವರು ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.
ಆತ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ನೀವು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿಸದಿರಬಹುದು. ಆದರೆ, ಖಂಡಿತ ಐಪಿಎಲ್ನಲ್ಲಿ ಅವರನ್ನು ಆಡಿಸಬಹುದು. ಇಲ್ಲಿ ಆಡಿದ ನಂತರ ಅವರನ್ನು ನೀವು ವಿಶ್ವಕಪ್ನಲ್ಲಿ ಆಡಿಸಿದಾಗ ಅದು ಇನ್ನೂ ವಿಭಿನ್ನವಾಗಿರಲಿದೆ.
ವರುಣ್ ಮಾಂತ್ರಿಕ ಸ್ಪಿನ್ನರ್ ಆಗಿದ್ದು, ಆತನ ಎಸೆತಗಳು ಬ್ಯಾಟ್ಸ್ಮನ್ಗಳಿಗೆ ಆಶ್ಚರ್ಯವನ್ನುಂಟು ಮಾಡಲಿವೆ. 2011ರ ವಿಶ್ವಕಪ್ನಲ್ಲಿ ಜಹೀರ್ ಖಾನ್ ನಕಲ್ ಎಸೆತಗಳನ್ನು ಪ್ರಯೋಗಿಸಿದ್ದನ್ನು ನೀವು ನೆನಪಿನಲ್ಲಿಟ್ಟುಕೊಂಡಿರಬಹುದು.
ಅವರು ಅದನ್ನು ಹಿಂದೆ ಎಂದೂ ಪ್ರಯೋಗಿಸಿರಲಿಲ್ಲ. ಹಾಗಾಗಿ, ಎಲ್ಲರಿಗೂ ಆಶ್ಚರ್ಯಕರವಾಗಿತ್ತು. ನೀವು ಹೊಸ ಬೌಲರ್ ಅಥವಾ ವಿಷಯಗಳೊಂದಿಗೆ ಹೋದರೆ ಅನುಕೂಲವಾಗಲಿದೆ. ಹಾಗಾಗಿ, ವರುಣ್ ಚಕ್ರವರ್ತಿ ಅವರಲ್ಲೂ ಅದು ನಡೆಯಬಹುದು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇದನ್ನು ಓದಿ:ರಿಷಭ್ ಪ್ರಬುದ್ಧತೆಯ ಮಟ್ಟ ಅತ್ಯುನ್ನತ ಹಾದಿಯಲ್ಲಿ ಸಾಗುತ್ತಿದೆ : ಪಾಂಟಿಂಗ್