ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಹುದ್ದೆ ಖಾಲಿ ಇದೆ. ಇದಕ್ಕಾಗಿ ಬಿಸಿಸಿಐ ಕೂಡ ಅರ್ಜಿಗಳನ್ನು ಕೋರಿತ್ತು. ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಇದಾದ ಬಳಿಕ ನಾಳೆ ಅಂದ್ರೆ ಜುಲೈ 1ರಂದು ಸಂದರ್ಶನದ ಬಳಿಕ ನೂತನ ಮುಖ್ಯ ಆಯ್ಕೆಗಾರರ ಹೆಸರನ್ನು ಪ್ರಕಟಗೊಳ್ಳಲಿದೆ. ಈ ಹುದ್ದೆಗೆ ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಹೆಸರು ಕೇಳಿ ಬರುತ್ತಿದೆ.
ಈ ಮಧ್ಯೆ ಟ್ವೀಟ್‌ನೊಂದು ಹೊರಬಿದ್ದಿದ್ದು, ಅಗರ್ಕರ್ ಮುಖ್ಯ ಆಯ್ಕೆಗಾರನಾಗುವ ದೊಡ್ಡ ಸೂಚನೆಗಳನ್ನು ನೀಡಿದೆ. ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಭಾರತದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರು ದೆಹಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಗರ್ಕರ್ ಮೊದಲ ಸಾಲಿನಲ್ಲಿದ್ದಾರೆ ಎಂಬ ವರದಿಗಳು ಈಗಾಗಲೇ ಇವೆ.
ಅಗರ್ಕರ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಕೋಚಿಂಗ್ ಸ್ಟಾಫ್‌ನ ಸದಸ್ಯರಾಗಿದ್ದರು. ಅವರು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಸಹಾಯಕ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು. ಅಗರ್ಕರ್ ಜೊತೆಗೆ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ದೆಹಲಿ ಫ್ರಾಂಚೈಸಿ ತಿಳಿಸಿದೆ. ಆದಾಗ್ಯೂ, ವ್ಯಾಟ್ಸನ್ ಅವರ ಮುಂದಿನ ಹೆಜ್ಜೆ ಏನು ಎಂಬುದು ತಿಳಿದಿಲ್ಲ.
ದೆಹಲಿ ಕ್ಯಾಪಿಟಲ್ಸ್ ಅವರು ಅಗರ್ಕರ್ ಮತ್ತು ವ್ಯಾಟ್ಸನ್ ಫೋಟೋವನ್ನು ಹಂಚಿಕೊಂಡು, ನಿಮ್ಮಿಬ್ಬರನ್ನೂ ಮರಳಿ ಕರೆತರುವ ಪ್ರಯತ್ನ ಸದಾ ಇರುತ್ತದೆ. ನಿಮ್ಮ ಕೊಡುಗೆಗೆ ಧನ್ಯವಾದಗಳು. ಅಜಿತ್ ಮತ್ತು ವ್ಯಾಟ್ಟೊ (ಶೇನ್ ವ್ಯಾಟ್ಸನ್) ಅವರಿಗೆ ಭವಿಷ್ಯಕ್ಕಾಗಿ ಎಲ್ಲಾ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮಾಜಿ 45 ವರ್ಷದ ವೇಗದ ಬೌಲರ್ ಅಗರ್ಕರ್ 26 ಟೆಸ್ಟ್, 191 ಏಕದಿನ ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 58 ವಿಕೆಟ್, 288 ವಿಕೆಟ್ ಮತ್ತು ಮೂರು ವಿಕೆಟ್ ಪಡೆದಿದ್ದಾರೆ.
ಈ ಹಿಂದೆ ಚೇತನ್ ಶರ್ಮಾ ಅವರು ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ ವರ್ಷದ ಆರಂಭದಲ್ಲಿ ಅವರ ಕುಟುಕು ಕಾರ್ಯಾಚರಣೆಯ ವಿಡಿಯೋವೊಂದು ಕಣ್ಣಮುಂದೆ ಬಂತು. ಇದಾದ ಬಳಿಕ ಅವರು ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಅಂದಿನಿಂದ ಶಿವಸುಂದರ್ ದಾಸ್ ಅವರು ಹಂಗಾಮಿ ಮುಖ್ಯ ಆಯ್ಕೆಗಾರರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇವರೊಂದಿಗೆ ಇತರ ಮೂವರು ಸದಸ್ಯರು ಕೂಡ ಸೇರಿದ್ದಾರೆ.
ಮಾಜಿ ವೇಗಿ ಅಜಿತ್ ಅಗರ್ಕರ್ ಅವು ಇತ್ತೀಚೆಗೆ ಅವರು ದೆಹಲಿ ಕ್ಯಾಪಿಟಲ್ಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ಅಗರ್ಕರ್ ಮುನ್ನಡೆಸಲಿದ್ದಾರೆ. ಆಯ್ಕೆಗಾರರ ವಾರ್ಷಿಕ ವೇತನವನ್ನು ಬಿಸಿಸಿಐ ಪರಿಶೀಲಿಸಲಿದೆ. ಪ್ರಸ್ತುತ ಅಧ್ಯಕ್ಷರಿಗೆ 1 ಕೋಟಿ ರೂ., ಆಯ್ಕೆದಾರರಿಗೆ ತಲಾ 90 ಲಕ್ಷ ರೂ. ಆದರೆ ದೆಹಲಿಯ ಸಹಾಯಕ ಕೋಚ್ ಮತ್ತು ಕಾಮೆಂಟೇಟರ್ ಆಗಿ ಅಗರ್ಕರ್ ಅದಕ್ಕಿಂತ ಹೆಚ್ಚು ಗಳಿಸುತ್ತಾರೆ. ಹೀಗಾಗಿ ವೇತನ ನೀತಿಯನ್ನು ಪರಿಶೀಲಿಸಲು ಬಿಸಿಸಿಐ ಬಯಸಿದೆ.
ಓದಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆ.. ಮೌನ ಮುರಿದ ವೀರೇಂದ್ರ ಸೆಹ್ವಾಗ್