ದುಬೈ: ಕಳೆದ ವರ್ಷ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡು ಕ್ರಿಕೆಟ್ ಲೋಕದ ಮನಸು ಗೆದ್ದಿದ್ದ ಥಾಯ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಮುಂದಿನ ವರ್ಷ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ದುರಾದೃಷ್ಟ ರೀತಿಯಲ್ಲಿ ಕಳೆದುಕೊಂಡಿದೆ.
2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಥಾಯ್ಲೆಂಡ್ ಒಂದೂ ಪಂದ್ಯವನ್ನು ಗೆಲ್ಲಲಿಲ್ಲ. ಆದರೆ ತಮ್ಮ ಮೊದಲ ಪ್ರಯತ್ನದಲ್ಲಿ ತೋರಿದ ಪ್ರದರ್ಶನ, ಸೋಲನ್ನು ಖುಷಿಯಾಗಿ ಸ್ವೀಕರಿಸುವ ಅವರ ಮನೋಭಾವ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು.
ಆದರೆ, ಕಳೆದೊಂದು ವರ್ಷದಿಂದ ಅವರ ಆಟದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಬ್ಯಾಟಿಂಗ್ ಚತುರತೆ ,ಚುರುಕು ಫೀಲ್ಡಿಂಗ್ ಹಾಗೂ ಬೌಲಿಂಗ್ ಸೇರಿದಂತೆ ಎಲ್ಲದರಲ್ಲೂ ಸಾಕಷ್ಟು ಸುಧಾರಣೆ ಸಾಧಿಸಿದ್ದ ಥಾಯ್ ಮಹಿಳೆಯರು ಚೊಚ್ಚಲ ಏಕದಿನ ವಿಶ್ವಕಪ್ನಲ್ಲೂ ಆಡುವ ಕನಸು ಕಂಡಿದ್ದರು. ಆದರೆ ದಿಢೀರ್ ಕಾಣಿಸಿಕೊಂಡ ರೂಪಾಂತರ ಕೊರೊನಾ ವೈರಸ್ ಮತ್ತು ಐಸಿಸಿ ತೆಗೆದುಕೊಂಡ ನಿರ್ಧಾರಗಳು ಅವರ ಆಸೆ, ಕನಸುಗಳನ್ನು ನುಚ್ಚುನೂರು ಮಾಡಿದೆ.
ಏಕದಿನ ವಿಶ್ವಕಪ್ಗೆ ಮೀಸಲಿದ್ದ 8 ತಂಡಗಳ ಬದಲಾಗಿ ಐಸಿಸಿ 2022ರ ವಿಶ್ವಕಪ್ಗೆ 10 ತಂಡಗಳನ್ನಾಡಿಸುವ ನಿರ್ಧಾರ ತೆಗೆದುಕೊಂಡಿತ್ತು. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ನೇರ ಅರ್ಹತೆ ಪಡೆದಿದ್ದರಿಂದ ಉಳಿದ 5 ತಂಡಗಳಿಗಾಗಿ ಐಸಿಸಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಜಿಂಬಾಬ್ವೆ, ಥಾಯ್ಲೆಂಡ್, ನೆದರ್ಲೆಂಡ್ಸ್, ಯುಎಸ್ಎ ಮತ್ತು ಐರ್ಲೆಂಡ್ ಸೇರಿದಂತೆ 9 ರಾಷ್ಟ್ರಗಳ ನಡುವೆ ಅರ್ಹತಾ ಟೂರ್ನಿಯನ್ನು ಆಯೋಜಿಸಿತ್ತು.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದರಿಂದ ಅಫ್ರಿಕನ್ ದೇಶಗಳು ಪ್ರಯಾಣ ನಿರ್ಬಂಧ ಹೇರಲು ತೀರ್ಮಾನಿಸಿದ್ದವು. ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳು ತವರಿಗೆ ಹಿಂತಿರುಗಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಐಸಿಸಿ ಇಡೀ ಟೂರ್ನಿಯನ್ನೇ ರದ್ದು ಮಾಡಿತು.
ಥಾಯ್ಲೆಂಡ್ಗೆ ಮಾರಕವಾದ ಐಸಿಸಿ ನಿರ್ಧಾರ
ಹಾಗೆಯೇ ಮುಂಬರುವ ವಿಶ್ವಕಪ್ಗೆ ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡುವುದಾಗಿ ಘೋಷಿಸಿತು. ಐಸಿಸಿ ಈ ನಿರ್ಧಾರ ಥಾಯ್ಲೆಂಡ್ಗೆ ಮಾರಕವಾಗಿ ಪರಿಣಮಿಸಿತು. ಏಕೆಂದರೆ, ಥಾಯ್ಲೆಂಡ್ ಇನ್ನೂ ಐಸಿಸಿಯಿಂದ ಏಕದಿನ ಕ್ರಿಕೆಟ್ ಸ್ಥಾನಮಾನ ಪಡೆಯದ ಕಾರಣ ಟೂರ್ನಿಯಲ್ಲಿ ಗರಿಷ್ಠ ಗೆಲುವು ಮತ್ತು ಅಂಕ ಸಂಪಾದಿಸಿದರೂ ಶ್ರೇಯಾಂಕರಹಿತ ತಂಡವಾದ್ದರಿಂದ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾಯಿತು. ಈಗಾಗಲೇ ಏಕದಿನ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ನೇರ ಅರ್ಹತೆ ಪಡೆದುಕೊಂಡವು.
ಅರ್ಹತಾ ಟೂರ್ನಿಯನ್ನು ಪರಿಗಣಿಸಿದ್ದರೆ ಥಾಯ್ಲೆಂಡ್ಗೆ ವಿಶ್ವಕಪ್ ಭಾಗವಾಗುವ ಅವಕಾಶ ಕೊನೆಯ ಸೇರ್ಪಡೆಗೊಂಡ 5 ತಂಡಗಳಿಗಿಂತ ಹೆಚ್ಚಿತ್ತು. ಏಕೆಂದರೆ ಪಾಕಿಸ್ತಾನ, ಬಾಂಗ್ಲಾದೇಶ ಗುಂಪಿನಲ್ಲಿ ಥಾಯ್ಲೆಂಡ್ ಗರಿಷ್ಠ ಅಂಕವನ್ನು ಪಡೆದು ಅಗ್ರಸ್ಥಾನ ಪಡೆದಿತ್ತು. ಆದರೀಗ ಏಕದಿನ ಸ್ಥಾನಮಾನ ಪಡೆದಿಲ್ಲ ಎಂಬ ಒಂದು ಕಾರಣದಿಂದ ಸಂಪೂರ್ಣ ಸದಸ್ಯರ ತಂಡವಾದ ಬಾಂಗ್ಲಾದೇಶ, ಜಿಂಬಾಬ್ವೆಯನ್ನು ಮಣಿಸಿದರೂ ವಿಶ್ವಕಪ್ ಅರ್ಹತೆ ಪಡೆಯಲು ವಿಫಲವಾಗಿದೆ. ಅಲ್ಲದೆ ಐಸಿಸಿ ತೆಗೆದುಕೊಂಡಿರುವ ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Abu Dhabi T10 League: 23 ಎಸೆತಗಳಲ್ಲಿ 77ರನ್ಗಳಿಸಿ ಆರ್ಭಟಿಸಿದ ಮೊಯಿನ್ ಅಲಿ