ದುಬೈ: ಏಷ್ಯಾ ಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಕೊರೊನಾಗೆ ತುತ್ತಾಗಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದೀಗ ಚೇತರಿಸಿಕೊಂಡಿದ್ದು, ದುಬೈಗೆ ಬಂದಿಳಿದು ತಂಡ ಸೇರಿಕೊಂಡಿದ್ದಾರೆ.
ಏಷ್ಯಾ ಕಪ್ ಆರಂಭಕ್ಕೂ ಮೊದಲು ಸೋಂಕಿಗೀಡಾಗಿದ್ದ ದ್ರಾವಿಡ್ ಕೆಲ ದಿನಗಳಿಂದ ಕ್ವಾರಂಟೈನ್ ಆಗಿದ್ದರು. ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ನಿನ್ನೆಯೇ ದುಬೈಗೆ ಹಾರಿ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಜಿಂಬಾಬ್ವೆ ಸರಣಿಗೆ ಹಂಗಾಮಿ ಕೋಚ್ ಆಗಿ ಕೆಲಸ ಮಾಡಿದ್ದ ವಿವಿಎಸ್ ಲಕ್ಷ್ಮಣ್ ಅವರು ಏಷ್ಯಾ ಕಪ್ಗಾಗಿ ದುಬೈಗೆ ತೆರಳಿದ್ದರು. ತಂಡದ ಅಭ್ಯಾಸದ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಮುಂದೆ ನಿಂತು ಅಗತ್ಯ ಸಲಹೆ ನೀಡಿದ್ದರು.
ಇದೀಗ ದ್ರಾವಿಡ್ ಆಗಮಿಸಿದ್ದು ವಿವಿಎಸ್ ಲಕ್ಷ್ಮಣ್ ತವರಿಗೆ ಮರಳುವ ಸಾಧ್ಯತೆ ಇದೆ. ಈ ಮೊದಲು ಬಿಸಿಸಿಐ ಕೂಡ ರಾಹುಲ್ ದ್ರಾವಿಡ್ ಅವರು ಚೇತರಿಸಿಕೊಳ್ಳುವವಗೆ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ದ್ರಾವಿಡ್ ಚೇತರಿಸಿಕೊಂಡ ಬಳಿಕ ತಂಡ ಸೇರಲಿದ್ದಾರೆ ಎಂದು ತಿಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ಪಂದ್ಯ ಇಂದು ಸಂಜೆ 7.30 ಕ್ಕೆ ಆರಂಭವಾಗಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ಗೆ ಕೋವಿಡ್ ದೃಢ: ಬಿಸಿಸಿಐ