ಮುಂಬೈ: ಅಕ್ಟೋಬರ್ 16ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ಗೋಸ್ಕರ ಟೀಂ ಇಂಡಿಯಾ ಇಂದು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಯಾರಿಗೆಲ್ಲ ಚಾನ್ಸ್ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಮಹತ್ವದ ಟೂರ್ನಿಗೋಸ್ಕರ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಈಗಾಗಲೇ ನಾಲ್ಕು ದೇಶಗಳು ತಮ್ಮ ತಂಡ ಪ್ರಕಟಿಸಿವೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ತಂಡ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.
ಅದಕ್ಕೋಸ್ಕರ ಇಂದು ಆಯ್ಕೆ ಮಂಡಳಿ ಸಭೆ ಸೇರಲಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ತಂಡ ಪ್ರಕಟಗೊಳ್ಳಲಿದೆ. ಗಾಯಗೊಂಡಿರುವ ಜಡೇಜಾ ಸ್ಥಾನಕ್ಕಾಗಿ ರವಿ ಬಿಷ್ಣೋಯ್, ಅಶ್ವಿನ್ ಹಾಗೂ ಅಕ್ಷರ್ ನಡುವೆ ಪೈಪೋಟಿ ನಡೆಯಲಿದೆ.
ಏಷ್ಯಾ ಕಪ್ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಇದೀಗ ಫಿಟ್ ಆಗಿದ್ದು, ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಆದರೆ, ಶಸ್ತ್ರಚಿಕಿತ್ಸೆಗೊಳಗಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನದಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ. ಈ ಜಾಗದಲ್ಲಿ ಅಕ್ಷರ್ ಪಟೇಲ್ ಅವಕಾಶ ಪಡೆದುಕೊಳ್ಳಬಹುದು ಎನ್ನಲಾಗ್ತಿದೆ. ರಿಷಭ್ ಪಂತ್ ಜೊತೆಗೆ ಎರಡನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಎರಡು ಅರ್ಹತಾ ತಂಡಗಳು ಗ್ರೂಪ್ ಬಿಯಲ್ಲಿ ಇವೆ. ಅಕ್ಟೋಬರ್ 23ರಂದು ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 13ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಶಿಖರ್ ಧವನ್ ಕ್ಯಾಪ್ಟನ್: ಬಿಸಿಸಿಐ
ವಿಶ್ವಕಪ್ಗೂ ಮೊದಲು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ಇಲ್ಲಿ ಅವಕಾಶ ಪಡೆದುಕೊಳ್ಳುವ ಬಹುತೇಕ ಎಲ್ಲ ಪ್ಲೇಯರ್ಸ್ ವಿಶ್ವಕಪ್ನಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಟೀಂ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಸರಣಿ: ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)
ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)
ಭಾರತ Vs ದಕ್ಷಿಣ ಆಫ್ರಿಕಾ ಸರಣಿ: ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)