ಹೈದರಾಬಾದ್: ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಕಳೆದ ರಾತ್ರಿ ಪ್ರಕಟಗೊಂಡಿದೆ. ಈ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಅಂತಹವರ ಸಾಲಿನಲ್ಲಿ ಸ್ಪಿನ್ನರ್ ರಾಹುಲ್ ಚಹರ್ ಕೂಡ ಸೇರಿದ್ದಾರೆ.
ಟೀಂ ಇಂಡಿಯಾ ಪರ ಕೇವಲ ಐದು ಟಿ-20 ಪಂದ್ಯಗಳನ್ನಾಡಿರುವ ರಾಹುಲ್ ಚಹರ್, ಅನುಭವಿ ಬೌಲರ್ಗಳಾದ ಯಜುವೇಂದ್ರ ಚಹಲ್ ಹಾಗೂ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಯಾದವ್ಗೆ ಹಿಂದಿಕ್ಕಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಆಯ್ಕೆ ಮಂಡಳಿ ಅವರ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಕಡಿಮೆ ಅವಧಿಯಲ್ಲಿ ಅವರು ನೀಡಿದ ಅತ್ಯುತ್ತಮ ಪ್ರದರ್ಶನ.
ಕಳೆದ ಕೆಲವು ವರ್ಷಗಳಿಂದ ಕುಲ್ದೀಪ್ ಹಾಗೂ ಯಜುವೇಂದ್ರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹಾಗಾಗಿ, ಹೊಸ ಪ್ರತಿಭೆಗೆ ಆಯ್ಕೆ ಸಮಿತಿ ಮಣೆ ಹಾಕಿದೆ.
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಕ್ರಿಕೆಟ್ ಪಂದ್ಯಕ್ಕೆ ಡೆಬ್ಯು ಮಾಡಿದ್ದ ರಾಹುಲ್ ಚಹರ್, ಕಳೆದ ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆದ ಚುಟುಕು ಕ್ರಿಕೆಟ್ನಲ್ಲೂ ಟೀಂ ಇಂಡಿಯಾ ತಂಡದ ಭಾಗವಾಗಿದ್ದರು. ಇಲ್ಲಿಯವರೆಗೆ ಟೀಂ ಇಂಡಿಯಾ ಪರ ಚಹರ್ ಆಡಿರುವುದು ಕೇವಲ ಐದು ಟಿ-20 ಪಂದ್ಯಗಳು. ಆದ್ರೆ ಈ ಪಂದ್ಯಗಳಿಂದ 7 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ ಏಕೈಕ ಏಕದಿನ ಪಂದ್ಯವನ್ನಾಡಿದ್ದು ಮೂರು ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: IPL: ಯುಎಇನಲ್ಲಿ ಆರ್ಸಿಬಿ ತಂಡ ಸೇರಿಕೊಂಡ ಗ್ಲೆನ್ ಮ್ಯಾಕ್ಸ್ವೆಲ್
ಐಪಿಎಲ್ನಲ್ಲೂ ಗಮನಾರ್ಹ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಹುಲ್ ಚಹರ್ ಅದ್ಭುತ ಪ್ರದರ್ಶನ ನೀಡಿದ್ದು, 38 ಪಂದ್ಯಗಳಿಂದ 41 ವಿಕೆಟ್ ಪಡೆದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಆಡಲು ಯುಎಇನಲ್ಲಿರುವ ರಾಹುಲ್ ಚಹರ್, ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.