ಅಡಿಲೇಡ್ (ಆಸ್ಟ್ರೇಲಿಯಾ): ಟಿ20 ವಿಶ್ವಕಪ್ ಟೂರ್ನಿಯ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 35 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. 185 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಐಲೆಂಡ್ ತಂಡಕ್ಕೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಅಡಿಲೇಡ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಬ್ಯಾಟಿಂಗ್ಗೆ ಇಳಿದ ನ್ಯೂಜಿಲ್ಯಾಂಡ್ ತಂಡಕ್ಕೆ ಫಿನ್ ಅಲೆನ್ (32) ಮತ್ತು ಕಾನ್ವೇ (28) ಉತ್ತಮ ಆರಂಭವನ್ನು ಒದಗಿಸಿದರು. ನಂತರ ಮೂರನೇ ಕ್ರಮದಲ್ಲಿ ಕ್ರೀಸ್ಗೆ ಬಂದ ಕ್ಯಾಪ್ಟನ್ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ವಿಲಿಯಮ್ಸನ್ ಕೇವಲ 35 ಎಸೆತಗಳಲ್ಲಿ ಮೂರು ಸಿಕ್ಸರ್ಗಳು ಮತ್ತು ಐದು ಬೌಂಡರಿಗಳೊಂದಿಗೆ 61 ರನ್ ಸಿಡಿಸಿ ಓಟಾದರು. ಗ್ಲೆನ್ ಫಿಲಿಪ್ಸ್ (17) ಮತ್ತು ಡ್ಯಾರಿಲ್ ಮಿಚೆಲ್ ಅಜೇಯ 31 ರನ್ಗಳೊಂದಿಗೆ 20 ಓವರ್ಗಳಲ್ಲಿ ಕೀವಿಸ್ ತಂಡ 6 ವಿಕೆಟ್ ನಷ್ಟಕ್ಕೆ 185 ರನ್ಗಳ ಸವಾಲಿನ ಪೇರಿಸಿತು.
ಐರ್ಲೆಂಡ್ ಪರ ಜೋಶುವಾ ಲಿಟಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. 18ನೇ ಓವರ್ನಲ್ಲಿ ಕೀವಿಸ್ ಕ್ಯಾಪ್ಟನ್ ವಿಲಿಯಮ್ಸನ್ ವಿಕೆಟ್ ಪಡೆಯುವುದೊಂದಿಗೆ ನೀಶಮ್ ಹಾಗೂ ಸ್ಯಾಂಟ್ನರ್ ಒಂದೇ ಓವರ್ನಲ್ಲಿ ಎಲ್ಬಿ ಬಲೆಗೆ ಕಡೆವಿದರು. ಡೆಲಾನಿ 2 ವಿಕೆಟ್ ಪಡೆದರು.
185 ರನ್ಗಳ ಗೆಲುವಿನ ಬೆನ್ನಟ್ಟಿದ ಐರ್ಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರರಾದ ಪಾಲ್ ಸ್ಟಿರ್ಲಿಂಗ್ (37) ಹಾಗೂ ಆಂಡ್ರ್ಯೂ ಬಾಲ್ಬಿರ್ನಿ (30) ಮೊದಲ ವಿಕೆಟ್ 68 ರನ್ಗಳನ್ನು ಪೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಆದರೆ, ನಂತರ ನಿರಂತರವಾಗಿ ಐರ್ಲೆಂಡ್ ತಂಡ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಲೋರ್ಕನ್ ಟಕರ್ (13), ಗರೆಥ್ ಡೆಲಾನಿ (10) ಮತ್ತು ಜಾರ್ಜ್ ಡಾಕ್ರೆಲ್ (23) ರನ್ಗಳನ್ನಷ್ಟೇ ಗಳಿಸಲು ಶಕ್ತರಾದರು. ಉಳಿದಂತೆ ಯಾವ ಆಟಗಾರರು ಒಂದಂಕಿ ರನ್ ಗಡಿ ದಾಟಲಿಲ್ಲ. ನ್ಯೂಜಿಲೆಂಡ್ ತಂಡದ ಪರ ಲಾಕಿ ಫರ್ಗುಸನ್ 3 ವಿಕೆಟ್ ಮತ್ತು ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಏಷ್ಯಾ ಕಪ್ ನಡೆಸದಂತೆ ಭಾರತ ಕ್ರಿಕೆಟ್ ಅಭಿಮಾನಿಗಳ ಆಗ್ರಹ