ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಹಣಾಹಣಿ ಇಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ. ಈಗಾಗಲೇ ತಲಾ ಒಮ್ಮೆ ಪ್ರಶಸ್ತಿ ಗೆದ್ದಿರುವ ಉಭಯ ತಂಡಗಳ ನಡುವೆ ಸಮಬಲದ ಹೋರಾಟದ ನಿರೀಕ್ಷೆಯಿದೆ.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತು ಚಾಂಪಿಯನ್‌ಶಿಪ್‌ನಿಂದ ಹೊರಬೀಳುವ ಭೀತಿಯಲ್ಲಿದ್ದ ಪಾಕ್ ಪುಟಿದೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ, ಸೂಪರ್ 12ರಲ್ಲಿ ಐರ್ಲೆಂಡ್ ವಿರುದ್ಧ ಐದು ರನ್ ಸೋಲನುಭವಿಸಿ ಹಿನ್ನಡೆ ಎದುರಿಸಿದ್ದ ಇಂಗ್ಲೆಂಡ್ ಫೈನಲ್ ಹಾದಿ ಕೂಡ ಸುಗಮವಾಗಿರಲಿಲ್ಲ. ಸೆಮೀಸ್ಗಳಲ್ಲಿ ಪಾಕ್ ತಂಡ ನ್ಯೂಜಿಲೆಂಡ್ಗೆ ಸೋಲುಣಿಸಿದರೆ, ಇಂಗ್ಲೆಂಡ್ ಪಡೆಯು ಭಾರತವನ್ನು ಮಣಿಸಿ ಫೈನಲ್ ಪ್ರವೇಶಿಸಿವೆ.
ಇತಿಹಾಸ ಮರುಕಳಿಸಲಿದೆಯಾ?: ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ವಿರುದ್ಧ 30 ವರ್ಷಗಳ ಹಿಂದಿನ ವಿಜಯವನ್ನು ಪುನರಾವರ್ತಿಸುವ ಅವಕಾಶವಿದೆ. 1992ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಪಾಕ್ ತಂಡ ಆಂಗ್ಲರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಅಂದು ಇಮ್ರಾನ್ ಖಾನ್ ಬಳಗ ಮಾಡಿದ್ದ ಸಾಧನೆಯನ್ನು ಇಂದಿನ ಬಾಬರ್ ಅಜಂ ಪಡೆ ಪುನರಾವರ್ತಿಸುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.
ವಿಶೇಷವೆಂದರೆ ಮೆಲ್ಬೋರ್ನ್‌ನ ಐತಿಹಾಸಿಕ ಅಂಗಳದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳೆರಡೂ ಸಹ ಇದುವರೆಗೂ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನೇ ಗೆದ್ದಿಲ್ಲ. ಆದರೀಗ ಯಾವುದಾದರೂ ತಂಡ ಗೆದ್ದು ಗೆಲುವಿನ ಖಾತೆ ತೆರೆಯಲಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿಎರಡೂ ತಂಡಗಳು ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. 2009ರಲ್ಲಿ ಪಾಕಿಸ್ತಾನವು ಶ್ರೀಲಂಕಾ ಮಣಿಸಿದ್ದರೆ, 2010 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಇದೀಗ ಗೆಲ್ಲುವ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ದ್ವಿತೀಯ ತಂಡ ಎಂಬ ಹೆಗ್ಗಳಿಕೆ ಪಡೆಯಲಿದೆ. ಈ ಹಿಂದೆ ವೆಸ್ಟ್ ಇಂಡೀಸ್ ಟೀಮ್ 2012 ಹಾಗೂ 2016ರಲ್ಲಿ ಗೆದ್ದು ದಾಖಲೆ ಬರೆದಿತ್ತು.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದವರು, ರನ್ನರ್ ಅಪ್ ಮಾಹಿತಿ:
ವರ್ಷ | ಗೆದ್ದ ತಂಡ | ರನ್ನರ್ ಅಪ್ |
2007 | ಭಾರತ | ಪಾಕಿಸ್ತಾನ |
2009 | ಪಾಕಿಸ್ತಾನ | ಶ್ರೀಲಂಕಾ |
2010 | ಇಂಗ್ಲೆಂಡ್ | ಆಸ್ಟ್ರೇಲಿಯಾ |
2012 | ವೆಸ್ಟ್ ಇಂಡೀಸ್ | ಶ್ರೀಲಂಕಾ |
2014 | ಶ್ರೀಲಂಕಾ | ಭಾರತ |
2016 | ವೆಸ್ಟ್ ಇಂಡೀಸ್ | ಇಂಗ್ಲೆಂಡ್ |
2021 | ಆಸ್ಟ್ರೇಲಿಯಾ | ನ್ಯೂಜಿಲೆಂಡ್ |
ವರುಣನ ಆತಂಕ: ಫೈನಲ್ ಹಣಾಹಣಿಗೆ ಮಳೆ ಭೀತಿ ಇದ್ದು, ಇಂದು ಪಂದ್ಯ ನಡೆಯದಿದ್ದರೆ ಸೋಮವಾರ ಮೀಸಲು ದಿನವಿದೆ. ಅಲ್ಲದೆ, ಮೀಸಲು ದಿನದಂದು ಹೆಚ್ಚುವರಿ ಆಟದ ಸಮಯವನ್ನು ಎರಡು ಗಂಟೆಗಳ ಮೂಲ ನಿಬಂಧನೆಯಿಂದ ನಾಲ್ಕು ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಒಂದು ವೇಳೆ ಪಂದ್ಯ ಮುಗಿಸಲು ಹೆಚ್ಚಿನ ಸಮಯ ಅಗತ್ಯವಿದ್ದರೆ, ಅದನ್ನು ಬಳಸಿಕೊಂಡು ಫಲಿತಾಂಶ ಪಡೆಯಲಾಗುವುದು. ಫೈನಲ್ ಪಂದ್ಯದ ಫಲಿತಾಂಶಕ್ಕೆ ಪ್ರತಿ ತಂಡವು ಕನಿಷ್ಠ 10 ಓವರ್ ಆಡುವುದು ಅಗತ್ಯವಾಗಿದೆ. ನಿಗದಿತ ಪಂದ್ಯದ ದಿನದಂದು ಪಂದ್ಯ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು. ಅಗತ್ಯವಿದ್ದರೆ ಮಾತ್ರ ಓವರ್‌ಗಳ ಕಡಿತ ಮಾಡಲಾಗುವುದು ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ನೇರಾನೇರ ಫಲಿತಾಂಶ:
ಪಂದ್ಯಗಳು : 28
ಪಾಕಿಸ್ತಾನ ಗೆಲುವು : 9
ಇಂಗ್ಲೆಂಡ್ ಗೆಲುವು : 17
1 ಪಂದ್ಯ ರದ್ದಾದರೆ, 1 ಪಂದ್ಯ ಟೈಡ್
ಟಿ20 ವಿಶ್ವಕಪ್‌ನಲ್ಲಿ 2 ಬಾರಿ ಎದುರಾದಾಗಲೂ ಇಂಗ್ಲೆಂಡ್ ಜಯ ಸಾಧಿಸಿದೆ.
ಸಂಭಾವ್ಯ 11ರ ಬಳಗ: ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ & ವಿ.ಕೀ), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ವಿ.ಕೀ), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30 ಗಂಟೆ(ಭಾರತೀಯ ಕಾಲಮಾನ)
ಇದನ್ನೂ ಓದಿ: ಪಾಕಿಸ್ತಾನಕ್ಕಿಂತ ಇಂಗ್ಲೆಂಡ್ ಬಲಿಷ್ಠ ತಂಡ: ಮಾಜಿ ನಾಯಕ ಮುಷ್ತಾಕ್ ಮೊಹಮದ್