ನವದೆಹಲಿ: ವಿಶ್ವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಎಲ್ಲಿ ಎಡವಿತೆಂದು ವಿಶ್ಲೇಷಣೆ ಮಾಡಿದ್ದಾರೆ. ಹಾಗೆಯೇ, ಕೊಹ್ಲಿ ಪಡೆಯನ್ನು ತಮ್ಮ ತಂತ್ರಗಾರಿಕೆಯ ಮೂಲಕ ಕಟ್ಟಿಹಾಕಿದ ಕೇನ್ ವಿಲಿಯಮ್ಸನ್ ನಾಯಕತ್ವವನ್ನು ಕೊಂಡಾಡಿದ್ದಾರೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಚೇತೋಹಾರಿ ಬೌಲಿಂಗ್ ಪ್ರದರ್ಶನ ತೋರಿದ ಕಿವೀಸ್ ಬಳಗ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ತಮ್ಮ ಗೆಲುವಿನ ಅಭಿಯಾನ ಆರಂಭಿಸಿತು.
ಮೊದಲ ಎಸೆತದಿಂದಲೂ ಕೇನ್ ವಿಲಿಯಮ್ಸನ್ ಬೌಲಿಂಗ್ ಬದಲಾವಣೆ ಉನ್ನತಮಟ್ಟದ್ದಾಗಿತ್ತು. ಅವರ ಯೋಜನೆ ಚೆನ್ನಾಗಿತ್ತು. ಮೊದಲ 6 ಓವರ್ಗಳಲ್ಲಿ ಕೇವಲ 35 ರನ್ ನೀಡಿ 2 ವಿಕೆಟ್ ಪಡೆದರು. ಅದರಲ್ಲಿ ಮೊದಲ 5 ಓವರ್ಗಳಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 20 ರನ್ ಮಾತ್ರ. ನಂತರ 6ರಿಂದ 10 ಓವರ್ ವರೆಗೆ ನಾವು ಗಳಿಸಿದ್ದು ಕೇವಲ 13 ರನ್ ಮಾತ್ರ ಎಂದು ಸಚಿನ್ ತಮ್ಮ ಫೇಸ್ಬುಕ್ನಲ್ಲಿ ಹೇಳಿದ್ದಾರೆ.
ಆ 4 ಓವರ್ಗಳು ನಿರ್ಣಾಯಕವಾಗಿದ್ದು, ನಾವು ಅದನ್ನು ಬಳಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡೆವು. ಅಲ್ಲಿ ಸುಲಭ ಸಿಂಗಲ್ಗಳು ನಮಗೆ ಲಭ್ಯವಾಗಲಿಲ್ಲ, ಈ ಕಾರಣದಿಂದ ನಮ್ಮ ಬ್ಯಾಟರ್ಗಳು ದೊಡ್ಡ ಹೊಡೆತಕ್ಕೆ ಪ್ರಯತ್ನಿಸಲು ಒತ್ತಾಯಿಸಿತು ಎಂದು ಸಚಿನ್ ಭಾರತ ಪಂದ್ಯದಲ್ಲಿ ಎಲ್ಲಿ ಹಿನ್ನಡೆಗೆ ಒಳಗಾಯಿತು ಎಂದು ವಿವರಿಸಿದ್ದಾರೆ.
ಇನ್ನು, ರಿಷಭ್ ಪಂತ್ ಕ್ರೀಸ್ಗೆ ಆಗಮಿಸಿದ ನಂತರ ತಕ್ಷಣ ವಿಲಿಯಮ್ಸನ್ ಸ್ಪಿನ್ನರ್ಗಳನ್ನು ಬದಲಾಯಿಸಿದರು. ಇದೊಂದು ಉತ್ತಮ ಮೂವ್ ಆಗಿತ್ತು. ರನ್ಗಳಿಗೆ ಕಡಿವಾಣ ಆಕಿದ ಕಿವೀಸ್ ಬೌಲರ್ಗಳು ಭಾರತೀಯ ಆಟಗಾರರಲ್ಲಿ ದೊಡ್ಡ ಒಡೆತಗಳನ್ನು ಪ್ರಯೋಗಿಸಲು ಒತ್ತಡವೇರಿದರು. ಕೊನೆಗೆ ಯಶಸ್ವಿಯಾಗದೆ ಬಹುತೇಕ ಬ್ಯಾಟರ್ಗಳು ಕ್ಯಾಚ್ ನೀಡಿ ಔಟಾದರು ಎಂದು ಭಾರತದ ಮಾಜಿ ಬ್ಯಾಟರ್ ಭಾರತ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣ ತಿಳಿಸಿದ್ದಾರೆ.
ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಸ್ಟರ್ ಬ್ಲಾಸ್ಟರ್ ಎದುರಾಳಿ ನಾಯಕನನ್ನು ನ್ಯೂಜಿಲ್ಯಾಂಡ್ ತಂಡದ ಬಂಡೆ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿಯ ಹೇಳಿಕೆಗಳು ದುರ್ಬಲ, ಧೋನಿ-ಶಾಸ್ತ್ರಿ ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸಬೇಕು : ಕಪಿಲ್ ದೇವ್