ಕರಾಚಿ: ಮುಂಬರುವ ಟಿ-20 ವಿಶ್ವಕಪ್ನಲ್ಲಿ ಬಾಬರ್ ಅಜಮ್ ನೇತೃತ್ವದ ತಂಡ ಭಾರತವನ್ನು ಮಣಿಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬ್ಲಾಂಕ್ ಚೆಕ್ ದೊರೆಯಲಿದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಗುರುವಾರ ಹೇಳಿದ್ದಾರೆ.
ಭಾರತ ತನ್ನ ಮೊದಲ ಟಿ -20 ವಿಶ್ವಕಪ್ನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಅಕ್ಟೋಬರ್ 24ರಂದು ಎದುರಿಸಲಿದೆ. ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಒಂದೂ ಪಂದ್ಯದಲ್ಲಿ ಸೋಲಿಸಿಲ್ಲ. ಹಾಗಾಗಿ ಮುಂಬರುವ ವಿಶ್ವಕಪ್ನಲ್ಲಿ ತಮ್ಮ ತಂಡ ಗೆದ್ದರೆ ಹೂಡಿಕೆದಾರರೊಬ್ಬರು ಬೋರ್ಡ್ಗೆ ಬ್ಲಾಂಕ್ ನೀಡಲು ಸಿದ್ಧರಿದ್ದಾರೆ ಎಂದು ರಮೀಜ್ ಹೇಳಿದ್ದಾರೆ.
ಐಸಿಸಿ ನೀಡುವ ನಿಧಿಯಿಂದ ಪಿಸಿಬಿ ಶೆಕಡಾ 50 ರಷ್ಟು ಕಾರ್ಯ ನಡೆಯುತ್ತಿದೆ. ಐಸಿಸಿಗೆ ಭಾರತದಿಂದ ಶೇಕಡಾ 90 ರಷ್ಟು ಹಣ ಬರುತ್ತದೆ. ಒಂದು ವೇಳೆ ಭಾರತ ಐಸಿಸಿಗೆ ಹಣ ನೀಡುವುದನ್ನು ನಿಲ್ಲಿಸಿದರೆ ಪಿಸಿಬಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಭಯಪಡುತ್ತಿದ್ದೇನೆ ಏಕೆಂದರೆ ಆ ರೀತಿ ಏನಾದರೂ ಆದರೆ, ಐಸಿಸಿ ಪಿಸಿಬಿಗೆ ಹಣಕೊಡುವುದನ್ನು ನಿಲ್ಲಿಸಬಹುದು. ಹಾಗಾಗಿ ಪಾಕಿಸ್ತಾನ ಕ್ರಿಕೆಟ್ ಅನ್ನು ನಾನು ಬಲಿಷ್ಠಗೊಳಿಸಲು ನಿರ್ಧರಿಸಿದ್ದೇನೆ ಎಂದು ಅಂತಾರಾಷ್ಟ್ರೀಯ ಸಮನ್ವಯ ಸ್ಥಾಯಿ ಸಮಿತಿಯ ಸಭೆಯಲ್ಲಿ ರಮೀಜ್ ರಾಜಾ ಹೇಳಿದ್ದಾರೆಂದು ಪಿಸಿಬಿ ಉಲ್ಲೇಖಿಸಿದೆ.
ಮುಂಬರುವ ಟಿ-20 ವಿಶ್ವಕಪ್ನಲ್ಲಿ ನಮ್ಮ ತಂಡ ಭಾರತವನ್ನು ಸೋಲಿಸಿದರೆ ಪಿಸಿಬಿಗೆ ಖಾಲಿ ಚೆಕ್ ನೀಡುವುದಾಗಿ ಒಬ್ಬ ಶ್ರೀಮಂತ ಹೂಡಿಕೆದಾರರೊಬ್ಬರು ನನಗೆ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನಮ್ಮ ಕ್ರಿಕೆಟ್ ಮಂಡಳಿಯ ಆರ್ಥಿಕ ವ್ಯವಸ್ಥೆ ಬಲಿಷ್ಠವಾದರೆ ನಮ್ಮನ್ನು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಂತಹ ತಂಡಗಳು ಅವರಿಗೆ ಬೇಕಾದಂತೆ ಬಳಸಿಕೊಳ್ಳುವುದಿಲ್ಲ. ಅತ್ಯತ್ತಮ ಕ್ರಿಕೆಟ್ ತಂಡ ಮತ್ತು ಅತ್ಯುತ್ತಮ ಕ್ರಿಕೆಟ್ ಆರ್ಥಿಕ ವ್ಯವಸ್ಥೆ ಎರಡು ನಮ್ಮ ಮುಂದಿರುವ ದೊಡ್ಡ ಸವಾಲುಗಳು ಎಂದು ರಮೀಜ್ ಹೇಳಿದ್ದಾರೆ.
ಇದನ್ನು ಓದಿ:T-20 ವಿಶ್ವಕಪ್: ಒಂದೇ ಗಂಟೆಯಲ್ಲಿ ಭಾರತ - ಪಾಕ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್!