ದುಬೈ: ಭಾನುವಾರ ನಡೆಯುವ ಸೂಪರ್ 12 ಪಂದ್ಯದಲ್ಲಿ ಭಾರತವನ್ನು ಶಾಹೀನ್ ಅಫ್ರಿದಿ ಕಾಡಿದ ಮಾದರಿಯಲ್ಲಿ ಕಾಡಲು ಸಿದ್ಧನಿದ್ದೇನೆ ಎಂದಿರುವ ಕಿವೀಸ್ ಬೌಲರ್ ಬೌಲ್ಟ್ಗೆ ತಿರುಗೇಟು ನೀಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ನಾವು ಅವರಿಗೆ ಕೌಂಟರ್ ಅಟ್ಯಾಕ್ ಮಾಡಲು ನಮ್ಮ ಬ್ಯಾಟರ್ಗಳನ್ನು ಪ್ರೇರೇಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೂಪರ್ 12ನಲ್ಲಿ ಎದುರಾಗುತ್ತಿವೆ. ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು, ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಒಂದು ರೀತಿಯ ಕ್ವಾರ್ಟರ್ ಫೈನಲ್ ಪಂದ್ಯವಾಗಲಿದೆ. ಈ ಹಿಂದಿನ ಪಂದ್ಯಗಳಲ್ಲಿ ಎರಡೂ ತಂಡಗಳು ಪಾಕಿಸ್ತಾನದ ವಿರುದ್ಧವೇ ಸೋಲು ಕಂಡಿವೆ.
" ನಿಸ್ಸಂಶಯವಾಗಿ, ನಾವು ಈ ಸ್ಪರ್ಧೆಯಲ್ಲಿ ಕೆಲವು ಗುಣಮಟ್ಟದ ಬೌಲರ್‌ಗಳ ವಿರುದ್ಧ ಆಡಲಿದ್ದೇವೆ ಮತ್ತು ಈ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುವ ತೀವ್ರತೆ ಕೂಡ ತುಂಬಾ ವಿಭಿನ್ನವಾಗಿದೆ. ನಾವು ಈ ಬೌಲರ್‌ಗಳ ವಿರುದ್ಧ ಆಡಿದ್ದೇವೆ. ಹಾಗಾಗಿ ನಮ್ಮ ಮುಂದೆ ಬರಲಿರುವುದು ಸಾಮಾನ್ಯ ಸಂಗತಿಯಲ್ಲ ಎಂಬ ಅರಿವು ನಮಗೆ ಇದೆ'' ಎಂದು ಭಾನುವಾರದ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
" ನಮ್ಮ ವಿರುದ್ಧ ಶಾಹೀನ್ ತೋರಿದ ಪ್ರದರ್ಶನವನ್ನು ಪುನರಾವರ್ತಿಸಲು ಬಯಸುತ್ತಾನೆ ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ. ಆದರೆ ನಾವು ಅದನ್ನು ಹೇಗೆ ಮಾನಸಿಕವಾಗಿ ತೆಗೆದುಕೊಳ್ಳುತ್ತೇವೆ ಮತ್ತು ನಾವು ಅದನ್ನು ಹೇಗೆ ಎದುರಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಭಿತವಾಗಿದೆ. ಪಂದ್ಯ ಹೇಗೆ ಸಾಗುತ್ತದೆಯೋ ಅದಕ್ಕೆ ತಕ್ಕಂತೆ ಏನು ಮಾಡಬೇಕೆಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದನ್ನು ಹೊರತುಪಡಿಸಿ ಸನ್ನಿವೇಷದಿಂದ ಹೊರಗೆ ಅಲೋಚಿಸಿ ಒತ್ತಡಕ್ಕೀಡಾಗುವುದನ್ನು ಬಯಸುವುದಿಲ್ಲ'' ಎಂದಿದ್ದಾರೆ .
ಭುವನೇಶ್ವರ್ ಫಾರ್ಮ್ ಬಗ್ಗೆ ಮಾತನಾಡಿದ ಕೊಹ್ಲಿ, ನಮ್ಮ ಸೋಲಿಗೆ ಯಾವುದೇ ಒಬ್ಬ ಬೌಲರ್ ಅನ್ನು ಪ್ರತ್ಯೇಕವಾಗಿಸಲು ನಾನು ಬಯಸುವುದಿಲ್ಲ. ಪಾಕಿಸ್ತಾನದ ವಿರುದ್ಧ ನಮ್ಮ ಸಂಪೂರ್ಣ ಬೌಲಿಂಗ್ ಘಟಕ ವಿಕೆಟ್ ಪಡೆಯಲು ವಿಫಲವಾಯಿತು. ಕ್ರೀಡೆಯಲ್ಲಿ ಅವೆಲ್ಲವೂ ಸಾಮಾನ್ಯ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೀವು ಮೈದಾನಕ್ಕಿಳಿದಾಗಲೆಲ್ಲಾ ವಿಕೆಟ್ ಪಡೆಯುತ್ತೀರಿ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಆದರೆ ಈ ಹುಡುಗರೇ ನಮಗೆ ಅತ್ಯುತ್ತಮ ಗೆಲುವುಗಳನ್ನು ಹಿಂದೆ ತಂದುಕೊಟ್ಟಿದ್ದಾರೆ. ಪಾಕಿಸ್ತಾನದ ವಿರುದ್ಧ ಎಲ್ಲಿ ತಪ್ಪಾಗಿದೆ ಎನ್ನವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆ ಪಂದ್ಯದಲ್ಲಿ ನಾವು ವೃತ್ತಿಪರ ಕ್ರಿಕೆಟ್ ತಂಡವಾಗಿ ಸಂಪೂರ್ಣವಾಗಿ ವಿಫಲವಾದೆವು. ಅದಕ್ಕೆ ಯಾವುದೇ ನೆಪ ಹೇಳುವ ಅಗತ್ಯವಿಲ್ಲ. ನಾವು ಸಂಪೂರ್ಣ ತಂಡವಾಗಿ ಸೋತಿದ್ದೇವೆ, ಇಲ್ಲಿ ಯಾವುದೇ ಒಬ್ಬ ಆಟಗಾರನನ್ನು ಗುರಿ ಮಾಡುವುದಕ್ಕೆ ಬಯಸಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಧರ್ಮದ ಆಧಾರದಲ್ಲಿ ನಿಂಧಿಸುವುದು ಹೀನ ಕೃತ್ಯ, ನಾವೆಲ್ಲರೂ ಶಮಿ ಬೆನ್ನಿಗಿದ್ದೇವೆ, ಇರುತ್ತೇವೆ : ಕೊಹ್ಲಿ