ನವದೆಹಲಿ : ಮಂಗಳವಾರ ಐಸಿಸಿ 2021ರ ಟಿ20 ವಿಶ್ವಕಪ್ನ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 24ರಂದು ತಮ್ಮ ಮೊದಲ ಪಂದ್ಯದಲ್ಲಿ ಎದುರುಬದುರಾಗುತ್ತಿವೆ.
ಐಸಿಸಿ ವೇಳಾಪಟ್ಟಿ ಬಿಡುಗಡೆಯ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಟೂರ್ನಮೆಂಟ್ ಆರಂಭಿಕ ಹಂತದಲ್ಲೇ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡುತ್ತಿರುವುದು ತುಂಬಾ ಒಳ್ಳೆಯದು ಎಂದು ಗಂಭೀರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
"2007ರಲ್ಲಿ ನಾವು ವಿಶ್ವಕಪ್ಗೆ ತೆರಳಿದ್ದಾಗ ಮೊದಲ ಪಂದ್ಯ ಸ್ಕಾಟ್ಲೆಂಡ್ ಜೊತೆಗಿತ್ತು. ಆದರೆ, ಅದು ಮಳೆಯಿಂದ ರದ್ದಾಗಿತ್ತು. ಹಾಗಾಗಿ, ಪ್ರಾಯೋಗಿಕವಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯ ನಮ್ಮ ಮೊದಲ ಪಂದ್ಯವಾಗಿತ್ತು. ಆದ್ದರಿಂದಾಗಿ ನಾನು ಈ ಬಾರಿ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುವುದು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದೇನೆ.
ಯಾಕೆಂದರೆ, ಪಾಕಿಸ್ತಾನ ಪಂದ್ಯದ ಬಗ್ಗೆ ನೀವು ಆಲೋಚಿಸುವುದು ತಪ್ಪುತ್ತದೆ ಮತ್ತು ಮುಂದಿನ ಪಂದ್ಯಗಳತ್ತ ಗಮನ ಹರಿಸಲು ಇದು ತಂಡಕ್ಕೆ ನೆರವಾಗಲಿದೆ. ಇದು ತಂಡಕ್ಕಷ್ಟೇ ಅಲ್ಲದೆ ದೇಶದ ಅಭಿಮಾನಿಗಳಿಗೂ ಟೂರ್ನಮೆಂಟ್ ಮೇಲೆ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಫಲಿತಾಂಶ ಏನೇ ಆಗಿರಲಿ, ಎರಡೂ ದೇಶಗಳು ಆರಂಭಿಕ ಹಂತದಲ್ಲಿ ಪರಸ್ಪರರ ವಿರುದ್ಧ ಆಡುತ್ತಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷ ತಂದಿದೆ ಎಂದು ಭಾರತಕ್ಕೆ 2 ವಿಶ್ವಕಪ್ ತಂದು ಕೊಟ್ಟ ತಂಡದ ಭಾಗವಾಗಿದ್ದ ಗಂಭೀರ್ ಹೇಳಿದ್ದಾರೆ.
ಯುಎಇನಲ್ಲಿ 2021ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ನವೆಂಬರ್ 14ರವರೆಗೆ ನಡೆಯಲಿದೆ. ಟೂರ್ನಮೆಂಟ್ ಒಮಾನ್ ಮತ್ತು ಪಪುವಾ ನ್ಯೂಗಿನಿ ನಡುವೆ ಮೊದಲ ಪಂದ್ಯ ನಡೆಯಲಿದೆ. ಅದೇ ದಿನ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಸಂಜೆ ಪಂದ್ಯದಲ್ಲಿ ಸೆಣಸಾಡಲಿವೆ.
ಇದನ್ನು ಓದಿ:T20 World Cup: ಅಕ್ಟೋಬರ್ 24 ರಂದು ಭಾರತ-ಪಾಕ್ ಹಣಾಹಣಿ: ಮುಂದಿನ ಪಂದ್ಯಗಳ ವಿವರ ಇಲ್ಲಿದೆ..