ನವದೆಹಲಿ: ಕೋವಿಡ್ 19 ಕಾರಣದಿಂದ ಈ ಬಾರಿ ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ ಅನ್ನು ಬಿಸಿಸಿಐ ಹೊರದೇಶದಲ್ಲಿ ಆಯೋಜಿಸುತ್ತಿದೆ. ಇದಕ್ಕಾಗಿ ಟಿಕೆಟ್ ಮಾರಾಟದಿಂದ ಬರುವ ಸಂಪೂರ್ಣ ಆದಾಯವನ್ನು ಇಸಿಬಿ(ಎಮಿರೇಟ್ಸ್ ಕ್ರಿಕೆಟ್ ಬೋರ್ಡ್) ಮತ್ತು ಓಸಿ(ಓಮನ್ ಕ್ರಿಕೆಟ್)ಗೆ ನೀಡಲು ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತನ್ನ ಸದಸ್ಯರಿಗೆ ತಿಳಿಸಿದೆ.
ಬಿಸಿಸಿಐ ವಿಶ್ವಕಪ್ ಆತಿಥ್ಯವಹಿಸುವ ಇಸಿಬಿಗೆ ಆಯೋಜನಾ ಶುಲ್ಕವಾಗಿ 1.5 ಮಿಲಿಯನ್ ಡಾಲರ್ (11 ಕೋಟಿ) ನೀಡಲಿದೆ ಮತ್ತು ಐಸಿಸಿಯಿಂದ ಕಾರ್ಯಾಚರಣೆಯ ವೆಚ್ಚವಾಗಿ 5.5 ಮಿಲಿಯನ್ ಡಾಲರ್ ಸೇರಿ ಒಟ್ಟು 7 ಮಿಲಿಯನ್ ಡಾಲರ್ ಮೊತ್ತ ಪಡೆಯಲಿದೆ. ಜೊತೆಗೆ ಟಿಕೆಟಿಂಗ್ ಮಾರಾಟದ ಹಕ್ಕು ಮತ್ತು ಪಂದ್ಯದ ಟಿಕೆಟ್ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಇಸಿಬಿ ಉಳಿಸಿಕೊಳ್ಳುತ್ತದೆ.
ಬಿಸಿಸಿಐ ಮುಸ್ಕಾಟ್ನಲ್ಲಿ 6 ಪಂದ್ಯಗಳನ್ನು ಆಯೋಜಿಸಲಿದೆ. ಇದಕ್ಕಾಗಿ ಓಮನ್ ಕ್ರಿಕೆಟ್ ಮಂಡಳಿಗೆ 4,00,000 ಡಾಲರ್(2,94,73,640 ರೂ) ಮೊತ್ತವನ್ನು ಆತಿಥ್ಯದ ಶುಲ್ಕವಾಗಿ ನೀಡಲಿದೆ. ಜೊತೆಗೆ ಬಿಸಿಸಿಐ ಟಿಕೆಟಿಂಗ್ ಹಕ್ಕು ವರ್ಗಾಯಿಸಿದೆ ಮತ್ತು ಟಿಕೆಟ್ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಓಮನ್ ಕ್ರಿಕೆಟ್ ಪಡೆದುಕೊಳ್ಳಲಿದೆ.
ಬಿಸಿಸಿಐ ಈ ಈವೆಂಟ್ ನಡೆಸಲು ಸ್ಥಳೀಯ ಸಂಘಟನಾ ಸಮಿತಿಯನ್ನು (ಎಲ್‌ಒಸಿ) ರಚಿಸಿದ್ದು, ಇದರಲ್ಲಿ ಮುಖ್ಯವಾಗಿ ಬಿಸಿಸಿಐನ ಸಿಬ್ಬಂದಿ ಮತ್ತು ಇಸಿಬಿಯಿಂದ ಕೆಲವು ಸಿಬ್ಬಂದಿ ಇರಲಿದ್ದಾರೆ.
ಮಹತ್ವದ ಈವೆಂಟ್‌ನ ಹೋಸ್ಟಿಂಗ್ ಹಕ್ಕನ್ನು ಬಿಸಿಸಿಐ ಹೊಂದಿದ್ದರೂ, ಅದನ್ನು ಕೋವಿಡ್ -19 ಕಾರಣದಿಂದ ಯುಎಇ ಮತ್ತು ಒಮನ್‌ಗೆ ಸ್ಥಳಾಂತರಿಸಲಾಗಿದೆ. ಇನ್ನು ಭಾರತ ಮತ್ತು ಪಾಕಿಸ್ತಾನವು ಅಕ್ಟೋಬರ್ 24 ರಂದು ಗುಂಪು ಹಂತದ ಮುಖಾಮುಖಿಯಲ್ಲಿ ಸೆಣಸಾಡಲಿವೆ. ಟೂರ್ನಮೆಂಟ್ ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು, ನವೆಂಬರ್ 14 ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇದಕ್ಕೂ ಮುನ್ನ ಓಮನ್ನಲ್ಲಿ ಅಕ್ಟೋಬರ್ 17ರಿಂದ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಓಮನ್ ಮತ್ತು ಪಿಎನ್ಜಿ ಸೆಣಸಾಡಲಿವೆ. ಸೂಪರ್ 12 ಗುಂಪು ಹಂತ ಅಕ್ಟೋಬರ್ 23ರಂದು ಆರಂಭವಾಗಲಿದೆ.
ಇದನ್ನೂ ಓದಿ:14 ಟಿ20, 4 ಟೆಸ್ಟ್ ಸೇರಿ 3 ಏಕದಿನ ಪಂದ್ಯ: 2021-22ನೇ ಸಾಲಿನ ಟೀಂ ಇಂಡಿಯಾ ವೇಳಾಪಟ್ಟಿ ರಿಲೀಸ್