ಅಬುದಾಭಿ: ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ 3ನೇ ದಿನವಾದ ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ್ ತಂಡ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 190 ರನ್ ಗಳಿಸಿದೆ. ಈ ಮೂಲಕ ಸ್ಕಾಟ್ಲೆಂಡ್ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆಫ್ಘನ್ ತಂಡ ಉತ್ತಮ ಆರಂಭ ಪಡೆದು 190 ಸೇರಿಸಿತು. ಆರಂಭಿಕರಾದ ಹಜರತ್ತುಲ್ಲಾ ಜಾಝಿ, ಮೊಹಮ್ಮದ್ ಶೆಹಜಾದ್ 50 ರನ್ ಜೊತೆಯಾಟ ನೀಡಿದ್ದರು. ಜಾಝಿ 30 ಬಾಲ್ನಲ್ಲಿ 44 ರನ್ಗಳಿಸಿದರೆ, ಶೆಹಜಾದ್ 15 ಎಸೆತದಲ್ಲಿ 22 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಕ್ರೀಸ್ಗಿಳಿದ ರೆಹಮತ್ತುಲ್ಲಾ ಗುರ್ಬಾಜ್, ನಜೀಬುಲ್ಲಾ ಜರ್ಧಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಗುರ್ಬಾಜ್ 37 ಬಾಲ್ನಲ್ಲಿ 46 ಹಾಗೂ ಜರ್ಧಾನ್ ಕೇವಲ 34 ಎಸೆತಕ್ಕೆ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 59 ರನ್ಗಳಿಸಿ ತಂಡದ ಮೊತ್ತ ಏರಿಸಿದರು. ಅಂತಿಮವಾಗಿ ಆಫ್ಘನ್ ತಂಡ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು.
ಸ್ಕಾಟ್ಲೆಂಡ್ ಪರ ಸಫ್ಯಾನ್ ಶರೀಫ್ 2 ಹಾಗೂ ಜೋಶ್ ಡೇವಿ ಮತ್ತು ಮಾರ್ಕ್ ವ್ಯಾಟ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಶ್ರೀಮಂತ ಕ್ರಿಕೆಟ್ ಟೂರ್ನಿ IPLಗೆ ಮತ್ತೆರಡು ತಂಡ ಸೇರ್ಪಡೆ..12 ಸಾವಿರ ಕೋಟಿ ರೂ. BCCI ಪಾಲು