ನವದೆಹಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಅವರೊಂದಿಗೆ ಅಶಿಸ್ತಿನಿಂದ ವರ್ತಿಸಿದ ಕಾರಣ ಈ ಋತುವಿನ ದೇಶೀಯ ಕ್ರಿಕೆಟ್ನಿಂದ ಕ್ರಿಕೆಟಿಗ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಅಮಾನತುಗೊಳಿಸಿದೆ.
ಬಿಸಿಎಯ ಕೆಲ ಸದಸ್ಯರ ವಿರೋಧದ ನಡುವೆಯೂ ಗುರುವಾರ (ಜನವರಿ 21) ಸುಪ್ರೀಂ ಕೌನ್ಸಿಲ್ ಈ ನಿರ್ಧಾರ ಕೈಗೊಂಡಿದೆ. ಕೃನಾಲ್ ಪಾಂಡ್ಯ ಅವರೊಂದಿಗೆ ವಾಗ್ವಾದ ನಡೆಸಿದ್ದ ಹೂಡಾ ಜನವರಿ 10ರಂದು ನಡೆದ ಟೂರ್ನಿಯ ಮೊದಲ ಪಂದ್ಯದಿಂದ ಹೊರ ನಡೆದಿದ್ದರು. ಈ ಅತಿರೇಕದ ವರ್ತನೆ ಬಿಸಿಎಗೆ ಕೆಂಗಣ್ಣಿಗೆ ಗುರಿಯಾಗಿತ್ತು.
ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರು ನೀಡಿದ ವರದಿಗಳು ಮತ್ತು ಹೂಡಾ ಅವರೊಂದಿಗಿನ ಮಾತುಕತೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಎ ಮಾಧ್ಯಮ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸತ್ಯಜಿತ್ ಗೇಕ್ವಾಡ್ ಹೇಳಿದರು.
ಇದನ್ನೂ ಓದಿ...ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ಪಾಂಡ್ಯ ಜೊತೆ ಜಗಳದಿಂದ ತಂಡ ತೊರೆದ ಹೂಡಾ
ಸದ್ಯ ಜರುಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ ಮತ್ತು ಮುಂಬರುವ ಯಾವುದೇ ದೇಶೀಯ ಸ್ಪರ್ಧೆಯಲ್ಲಿ ಹೂಡಾ ಭಾಗವಹಿಸುವಂತಿಲ್ಲ. 2021-22ರ ಕ್ರೀಡಾ ಋತುವಿನಲ್ಲಿ ಹೂಡಾ ಮತ್ತೆ ಬರೋಡಾ ಪರ ಆಡಬಹುದು ಎಂದು ಗೇಕ್ವಾಡ್ ತಿಳಿಸಿದರು.
ಬಿಸಿಎ ಜಂಟಿ ಕಾರ್ಯದರ್ಶಿ ಪರಾಗ್ ಪಟೇಲ್ ಈ ಕುರಿತು ಹೇಳಿಕೆ ನೀಡಿದ್ದು, ಹೂಡಾ ಅವರು ತಮ್ಮ ಸಮಸ್ಯೆಗಳನ್ನು ಮ್ಯಾನೇಜ್ಮೆಂಟ್ ಜೊತೆಗೆ ಹಂಚಿಕೊಳ್ಳದೆ ತಂಡದಿಂದ ಹೊರನಡೆಯುವ ಮೂಲಕ ತಪ್ಪು ಮಾಡಿದ್ದಾರೆ. ತನಗೆ ತಾನೇ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದರು.
ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಗೆ ಬರೋಡಾದ ಉಪನಾಯಕನಾಗಿ ನೇಮಕಗೊಂಡಿದ್ದ ಹೂಡಾ, ಜನವರಿ 9ರಂದು ಪಾಂಡ್ಯ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ತಂಡವನ್ನು ತ್ಯಜಿಸಿ ಹೋಟೆಲ್ ತೊರೆದಿದ್ದರು. ಮತ್ತು ಅಭ್ಯಾಸದ ಅವಧಿಯಲ್ಲಿ ಪಾಂಡ್ಯ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.