ಗುವಾಹಟಿ: ನಾಯಕ ಮನೀಶ್ ಪಾಂಡೆ ಮತ್ತು ಬೌಲರ್ಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಮುನ್ನುಗ್ಗುತ್ತಿದೆ.
ಶನಿವಾರ ಗುವಾಹಟಿಯ ಬಾರ್ಸಾಪರ ಸ್ಟೇಡಿಯಂನಲ್ಲಿ ನಡೆದ ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 33 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಾಯಕ ಮನೀಶ್ ಪಾಂಡೆ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 142 ರನ್ಗಳಿಸಿತ್ತು. ಪಾಂಡೆ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ಗಳಿಸಿದರು. ಮಯಾಂಕ್ 29 ಎಸೆತಗಳಲ್ಲಿ 28 ಮತ್ತು ಅನಿವೃದ್ಧ ಜೋಶಿ 16 ಎಸೆತಗಳಲ್ಲಿ 23 ರನ್ಗಳಿಸಿದರು. ಪಡಿಕ್ಕಲ್(6) ಮತ್ತು ಕರುಣ್ ನಾಯರ್(6)ಕೆ ಗೌತಮ್(7) ಮತ್ತೊಮ್ಮೆ ವಿಫಲರಾದರು.
ಸರ್ವೀಸಸ್ ಪರ ದಿವೇಶ್ ಪತಾನಿಯಾ 31ಕ್ಕೆ 2, ಸಚ್ಚಿದಾನಂದ್ ಪಾಂಡೆ 31ಕ್ಕೆ1, ರಾಹುಲ್ ಸಿಂಗ್ ಮತ್ತು ಲಖನ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
143 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಸರ್ವೀಸಸ್ ತಂಡ ಕರ್ನಾಟಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 109ರನ್ಗಳಿಸಿ 33 ರನ್ಗಳ ಸೋಲು ಕಂಡಿತು. 44 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್ಗಳಿಸಿದ ನಾಯಕ ಗಹ್ಲೌತ್ ರಾಹುಲ್ ಸಿಂಗ್ ತಂಡದ ಗರಿಷ್ಠ ರನ್ ಸ್ಕೋರರ್ ಆದರು. ಅಮಿತ್ ಪಚ್ಚಾರ 23 ರನ್ಗಳಿಸಿದರು. ಉಳಿದ ಬ್ಯಾಟರ್ಗಳು 20ರ ಗಡಿ ದಾಟುವಲ್ಲಿ ವಿಫಲರಾದರು.
ಕರ್ನಾಟಕ ಪರ ಜೆ ಸುಚೀತ್ 4 ಓವರ್ಗಳಲ್ಲಿ 15 ರನ್ ನೀಡಿ 1 ವಿಕೆಟ್, ಕೆ ಗೌತಮ್ 19ಕ್ಕೆ1, ವೇಗಿ ವಿ. ವೈಶಾಕ್ 25ಕ್ಕೆ 3, ದರ್ಶನ್ ಎಂಬಿ 30ಕ್ಕೆ 2 ವಿಕೆಟ್ ಪಡೆದು ಗೆಲುವಿನ ರೂವಾರಿಗಳಾದರು.
ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಕರ್ನಾಟಕ ತಂಡ ಸೋಮವಾರ ತನ್ನ ಮುಂದಿನ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಮಂಗಳವಾರ ಬೆಂಗಾಲ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ.
ಇದನ್ನೂ ಓದಿ:ನೆಹ್ರಾ, ಧವನ್, ಪಂತ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಕೋಚಿಂಗ್ ನೀಡಿದ್ದ ತಾರಕ್ ಸಿನ್ಹಾ ನಿಧನ