ದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy 2021) ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ (Karnataka vs Saurashtra) ಸೌರಾಷ್ಟ್ರದ ವಿರುದ್ಧ 2 ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ (Arun Jaitley Stadium) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸೌರಾಷ್ಟ್ರ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ಗಳಿಕೆ ಮಾಡಿತು. ಆರಂಭದಲ್ಲೇ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ 10 ರನ್ಗಳಿಕೆ ಮಾಡುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶೆಲ್ಡನ್ ಜಾಕ್ಸನ್ 43 ಎಸೆತಗಳಲ್ಲಿ ಅರ್ಧಶತಕ(50ರನ್) ಸಿಡಿಸಿ ತಂಡಕ್ಕೆ ಆಸರೆಯಾದರು.
ಕೊನೆಯಲ್ಲಿ ತಂಡದ ಚಿರಾಗ್ (13) ಹಾಗೂ ಸಮರ್ಥ್ 17 ರನ್ಗಳಿಕೆ ಮಾಡಿ ತಂಡ 20 ಓವರ್ಗಳಲ್ಲಿ 145 ರನ್ಗಳಿಕೆ ಮಾಡುವಂತೆ ಮಾಡಿದರು. ಕರ್ನಾಟಕ ಪರ ಕೌಶಿಕ್, ಕಾರ್ಯಪ್ಪ ಹಾಗೂ ವೈಶಾಖ್ ತಲಾ 2 ವಿಕೆಟ್ ಪಡೆದು ಮಿಂಚಿದರು.
146 ರನ್ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಸೌರಾಷ್ಟ್ರ ಎಸೆದ ಮೊದಲ ಓವರ್ನಲ್ಲಿ ಬಿಎಆರ್ ಶರತ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮನೀಷ್ ಪಾಂಡೆ (4) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್ ಕೇವಲ 5 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಮಿಂಚಿದ ರೋಹನ್- ಅಭಿನವ್
5ನೇ ವಿಕೆಟ್ಗೆ ಜೊತೆಯಾದ ರೋಹನ್ ಹಾಗೂ ಅಭಿನವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 33ರನ್ಗಳಿಕೆ ಮಾಡಿದ ರೋಹಿನ್ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಇದರ ಹೊರತಾಗಿ ಕೂಡ ವಿಕೆಟ್ ಕಳೆದುಕೊಳ್ಳದಂತೆ ಜವಾಬ್ದಾರಿ ಆಟ ಪ್ರದರ್ಶನ ನೀಡಿದ ಅಭಿನವ್ ಮನೋಹರ್ ಅಜೇಯ 70ರನ್ಗಳಿಕೆ ಮಾಡಿ ತಂಡವನ್ನ19.5 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ಗಳಿಕೆ ಮಾಡಿ ಗೆಲುವಿನ ದಡ ಸೇರಿಸಿದರು.
ರೋಚಕ ಹಂತ ತಲುಪಿದ ಪಂದ್ಯ
ಕರ್ನಾಟಕ ಗೆಲುವಿಗೆ ಕೊನೆಯ 2 ಓವರ್ಗಳಲ್ಲಿ 10ರನ್ಗಳ ಅವಶ್ಯಕತೆ ಇತ್ತು. ಈ ವೇಳೆ 4ರನ್ಗಳಿಕೆ ಮಾಡಿದ್ದ ವೈಶಾಖ್ ವಿಕೆಟ್ ಒಪ್ಪಿಸಿದರು. ಈ ಓವರ್ನಲ್ಲಿ ಅಭಿನವ್ 5 ರನ್ ಗಳಿಕೆ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕೊನೆ ಓವರ್ನಲ್ಲಿ 5ರನ್ ಬೇಕಾಗಿತ್ತು. ಮೊದಲ ಎಸೆತದಲ್ಲಿ ಅಭಿನವ್ 1 ರನ್ ಗಳಿಕೆ ಮಾಡಿದರು. ನಂತರ ಬ್ಯಾಟಿಂಗ್ ಮಾಡಲು ಬಂದ ಕಾರ್ಯಪ್ಪ ವಿಕೆಟ್ ಒಪ್ಪಿಸಿದರು. ಹೀಗಾಗಿ ಪಂದ್ಯ ರೋಚಕ ಹಂತ ಪಡೆದುಕೊಂಡಿತು. ಆದರೆ ಕೊನೆಯಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಅಭಿನವ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.
ಇದನ್ನೂ ಓದಿ: ICC events : ಮುಂದಿನ 8 ವರ್ಷದಲ್ಲಿ 6 ವಿಶ್ವಕಪ್, ಪಾಕ್ನಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆ
ಕೊನೆಯ 2 ಓವರ್ಗಳಲ್ಲಿ ಕರ್ನಾಟಕ ತಂಡಕ್ಕೆ ಗೆಲ್ಲಲು 10 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಜಯಕುಮಾರ್ ವೈಶಾಖ್ (4) ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು. ಅದರಂತೆ ಅಂತಿಮ ಓವರ್ನಲ್ಲಿ 6 ಎಸೆತಗಳಲ್ಲಿ ಕರ್ನಾಟಕಕ್ಕೆ 5 ರನ್ಗಳು ಬೇಕಿತ್ತು. ಕೊನೆಯ ಓವರ್ನ ಮೊದಲ ಎಸೆತದಲ್ಲಿ ಅಭಿನವ್ ಮನೋಹರ್ 1 ರನ್ ಕಲೆಹಾಕಿದರೆ, 2ನೇ ಎಸೆತದಲ್ಲಿ ಕೆ.ಸಿ.ಕಾರ್ಯಪ್ಪ (0) ವಿಕೆಟ್ ಒಪ್ಪಿಸಿದರು. ಅಂತಿಮ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಭಿನವ್ ಮನೋಹರ್ ಕರ್ನಾಟಕ ತಂಡಕ್ಕೆ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಸೌರಾಷ್ಟ್ರ ಪರ ಉನಾದ್ಕಟ್ 4 ವಿಕೆಟ್, ಪಟೇಲ್, ಚಿರಾಗ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡರು.