ಮೆಲ್ಬೋರ್ನ್(ಆಸ್ಟ್ರೇಲಿಯಾ): ಭರ್ಜರಿ ಬ್ಯಾಟಿಂಗ್ನಿಂದಾಗಿ ಟಿ20 ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಈ ಕ್ಯಾಲೆಂಡರ್ ವರ್ಷದಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ದಾಖಲೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ 2ನೇ ಆಟಗಾರ ಎಂಬ ಖ್ಯಾತಿ ಪಡೆದರು. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಈ ದಾಖಲೆ ಮಾಡಿದ ಮೊದಲಿಗ.
ಟಿ20 ವಿಶ್ವಕಪ್ನಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಭರ್ಜರಿ ಅರ್ಧಶತಕ ಸಿಡಿಸಿದರು. 244ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ 61 ರನ್ ಗಳಿಸಿದ ಸೂರ್ಯ, ಈ ವಿಶ್ವಕಪ್ನ ಮೂರನೇ ಫಿಫ್ಟಿ ಬಾರಿಸುವ ಮೂಲಕ 1 ಸಾವಿರ ರನ್ ಸಾಧನೆಗೆ ಪಾತ್ರರಾದರು.
ಸೂರ್ಯಕುಮಾರ್ ಯಾದವ್ ಈ ವರ್ಷ ಆಡಿದ 28 ಇನ್ನಿಂಗ್ಸ್‌ಗಳಲ್ಲಿ 44.60 ಸರಾಸರಿಯಲ್ಲಿ 1,026 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 9 ಅರ್ಧಶತಕಗಳು ಅವರ ಬ್ಯಾಟ್‌ನಿಂದ ಸಿಡಿದಿವೆ. 117 ಅತ್ಯುತ್ತಮ ಸ್ಕೋರ್ ಆಗಿದೆ.
ಟಿ20 ಇತಿಹಾಸದಲ್ಲಿಯೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಸಾವಿರ ರನ್ ಗಳಿಸಿದ 2ನೇ ಆಟಗಾರ ಎಂಬ ದಾಖಲೆಯನ್ನು ಸೂರ್ಯಕುಮಾರ್ ಬರೆದರು. 2021ರಲ್ಲಿ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 73.66ರ ಸರಾಸರಿಯಲ್ಲಿ 1,326 ರನ್ ಕಲೆ ಹಾಕಿದ್ದರು. ಆ ವರ್ಷದಲ್ಲಿ ರಿಜ್ವಾನ್ 1 ಶತಕ ಮತ್ತು 12 ಅರ್ಧ ಶತಕಗಳನ್ನು ಗಳಿಸಿದ್ದರು. ರಿಜ್ವಾನ್ ದಾಖಲೆ ಮುರಿಯಲು ಸೂರ್ಯ 300 ರನ್ ಹಿಂದಿದ್ದಾರೆ.
ಸದ್ಯ ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಮೂರು ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 2 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಓದಿ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 71 ರನ್ ಗೆಲುವು: ಸೆಮೀಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸು