ಶಾರ್ಜಾ: ಭಾಗಶಃ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಸನ್ರೈಸರ್ಸ್ ಹೈದಾರಾಬಾದ್, ಲೀಗ್ನಲ್ಲಿ ತಮ್ಮಷ್ಟೇ ಸಮಸ್ಯೆಗೀಡಾಗಿ 7ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿಯೂ ಕೊನೆಯ ಓವರ್ನಲ್ಲಿ ಒತ್ತಡಕ್ಕೆ ಸಿಲುಕಿ ಬಹುಪಾಲು ಪಂದ್ಯಗಳನ್ನು ಕಳೆದುಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು ಮತ್ತು 6 ಸೋಲು ಕಂಡಿರುವ ಪಂಜಾಬ್ ಪ್ಲೇ ಆಫ್ ತಲುಪಲು ಇದು ಕೊನೆಯ ಅವಕಾಶ. ಈ ಪಂದ್ಯವನ್ನು ಸೋತರೆ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಲಿದೆ.
ಅಲ್ಲದೆ ತನ್ನ ಯುಎಇಯ ಮೊದಲ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದ ಪಂಜಾಬ್ ತನ್ನ ಆಟಗಾರರ ಆಯ್ಕೆಯಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಆಡಿಸದಿದ್ದಕ್ಕೆ ಟೀಕೆಗೆ ಗುರಿಯಾಗಿತ್ತು. ಕೊನೆಯ 18 ಎಸೆತಗಳಲ್ಲಿ 18 ರನ್ಗಳಿಸಲಾಗದೇ 2 ರನ್‌ಗಳಿಂದ ಸೋಲನುಭವಿಸಿತ್ತು.
ಇನ್ನು, 8 ಪಂದ್ಯಗಳಿಂದ ಕೇವಲ ಒಂದು ಗೆಲುವು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ಉಳಿದ 6 ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಕನಸು ಬೇರೆ ತಂಡಗಳ ಗೆಲುವು ಸೋಲಿನ ಲೆಕ್ಕಾಚಾರದ ಮೇಲೆ ಅವಲಂಭಿತವಾಗಿರುತ್ತದೆ.
ಹಾಗಾಗಿ, ವಿಲಿಯಮ್ಸನ್ ತಂಡ ಕೇವಲ ಗೌರವಕ್ಕಾಗಿ ಈ ಪಂದ್ಯಗಳನ್ನು ಆಡಬೇಕಾಗಿದೆ. ಈ ಪಂದ್ಯವನ್ನು ಹೈದರಾಬಾದ್ ಸೋತರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಈ ಮೂಲಕ ಐಪಿಎಲ್ನಲ್ಲಿ 2013ರ ಬಳಿಕ ಮೊದಲ ಬಾರಿಗೆ ಪ್ಲೇ ಆಫ್ ತಲುಪುವಲ್ಲಿ ಎಸ್ಆರ್ಹೆಚ್ ವಿಫಲವಾಗಲಿದೆ.
ಮುಖಾಮುಖಿ :
ಎರಡು ತಂಡಗಳು ಒಟ್ಟು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಹೈದರಾಬಾದ್ 12 ಮತ್ತು ಪಂಜಾಬ್ ಕೇವಲ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡಗಳು
ಹೈದರಾಬಾದ್ : ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ (ವಿಕೀ), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್/ಪ್ರಿಯಂ ಗರ್ಗ್, ಜೇಸನ್ ಹೋಲ್ಡರ್/ಜೇಸನ್ ರಾಯ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್.
ಪಂಜಾಬ್ ಕಿಂಗ್ಸ್: ಕೆಎಲ್ ರಾಹುಲ್ (ನಾಯಕ/ವಿಕೀ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್/ಕ್ರಿಸ್ ಗೇಲ್, ಕ್ರಿಸ್ ಜೋರ್ಡಾನ್, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್.