ಮುಂಬೈ: ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು ತಾವೇಕೆ ಲಿಟಲ್ ಚಾಂಪಿಯನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಮೆಂಟರಿಯಾಗಿ ಕೆಲಸ ಮಾಡುತ್ತಿರುವ ಸುನೀಲ್ ಗವಾಸ್ಕರ್ ಅವರ ತಾಯಿ ಮೀನಲ್ ಗವಾಸ್ಕರ್(94) ಅವರು ಮುಂಬೈನಲ್ಲಿ ಭಾನುವಾರ ನಿಧನರಾದರು. ಈ ನೋವಿನ ಮಧ್ಯೆಯೇ ಗವಾಸ್ಕರ್ ಕಾಮೆಂಟರಿ ಮುಂದುವರಿಸಿ ಕರ್ತವ್ಯನಿರ್ವಹಿಸಿದ್ದಾರೆ.
ಭಾನುವಾರ ಮುಕ್ತಾಯವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಗವಾಸ್ಕರ್ ಕಾಮೆಂಟರಿ ಬಾಕ್ಸ್ನಲ್ಲಿದ್ದಾಗ ತಾಯಿಯ ಸಾವಿನ ಸುದ್ದಿ ಬಂದಿದೆ. ಆದರೆ, ಪಂದ್ಯ ರೋಚಕ ಹಂತದಲ್ಲಿದ್ದ ಕಾರಣ ಅವರು ಕರ್ತವ್ಯವನ್ನು ಮುಗಿಸಿದ ಬಳಿಕ ಅಲ್ಲಿಂದ ತೆರಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮೀನಲ್ ಗವಾಸ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ಐಪಿಎಲ್ ಸೀಸನ್‌ನಲ್ಲಿ ಗವಾಸ್ಕರ್ ಕಾಮೆಂಟರಿ ಮಾಡಿರಲಿಲ್ಲ. ತಾಯಿಯ ಆರೋಗ್ಯ ವಿಚಾರಣೆಗೆ ಅಡ್ಡಿಯಾಗಲಿರುವ ಕಾರಣ ಐಪಿಎಲ್ನಿಂದ ದೂರವಿದ್ದರು. ಆದರೆ, ನಿನ್ನೆ ಬಾಂಗ್ಲಾದಲ್ಲಿದ್ದ ಗವಾಸ್ಕರ್ ಅವರಿಗೆ ಮಾತೃವಿಯೋಗದ ಸುದ್ದಿ ಬರಸಿಡಿಲಂತೆ ಬಂದೆರಗಿದೆ. ಟೆಸ್ಟ್ ಸರಣಿ ಮುಗಿದಿದ್ದು, ಗವಾಸ್ಕರ್ ಅವರು ಭಾರತಕ್ಕೆ ಹಿಂದಿರುಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಭಾರತ ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸನ್ನಿ ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 125 ಟೆಸ್ಟ್‌ಗಳಲ್ಲಿ 34 ಶತಕಗಳೊಂದಿಗೆ 10,125 ರನ್ ಗಳಿಸಿದ್ದು, 108 ಏಕದಿನದಲ್ಲಿ 3,092 ರನ್ ಬಾರಿಸಿದ್ದಾರೆ.
ಓದಿ: ರಾಷ್ಟ್ರೀಯ ತಂಡದಲ್ಲಿ ಆಡಿದ ರಗ್ಬಿ ಆಟಗಾರ ಈಗ ಚಾಯ್ವಾಲಾ.. ಬಿಹಾರದಲ್ಲಿ ರಗ್ಬಿ ಚಾಯ್ ಘಮ