ಮುಂಬೈ: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಉದಯೋನ್ಮುಖ ಚೆಸ್ ಆಟಗಾರ ಆರ್ ಪ್ರಜ್ಞಾನಂದ ಮತ್ತು ಬ್ಯಾಡ್ಮಿಂಟನ್ ತಾರೆ ಎಚ್‌ಎಸ್ ಪ್ರಣಯ್ ಅವರ ಸಾಧನೆಗಳನ್ನು ಶ್ಲಾಘಿಸಿರುವ ಹಿರಿಯ ಬ್ಯಾಟ್ಸ್‌ಮನ್ ಸುನೀಲ್ ಗವಾಸ್ಕರ್, ಮುಂದಿನ 10-15 ವರ್ಷಗಳಲ್ಲಿ ಭಾರತವು ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.
ಚೋಪ್ರಾ ಭಾನುವಾರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದರೆ, 18 ವರ್ಷದ ಪ್ರಜ್ಞಾನಂದ ಕಳೆದ ವಾರ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ರನ್ನರ್ ಅಪ್ ಆಗಿ ಇತಿಹಾಸವನ್ನು ಸೃಷ್ಟಿಸಿದರು. ಪ್ರಣಯ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ಸೆಮಿಫೈನಲ್ನಲ್ಲಿ ವಿಶ್ವದ ನಂಬರ್ ಒನ್ ವಿಕ್ಟರ್ ಆಕ್ಸೆಲ್‌ಸೆನ್ ಅವರನ್ನು ಸೋಲಿಸಿದ್ದರು.
ಈಗ ಇತರ ಕ್ರೀಡೆಗಳಿಗೂ ಸಾಕಷ್ಟು ಕವರೇಜ್ ಸಿಕ್ಕಿದೆ: ಗವಾಸ್ಕರ್ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,"ಮೊದಲು ಕೆಲವು ಕ್ರೀಡೆಗಳನ್ನು ಮಾತ್ರ ಚರ್ಚಿಸಲಾಗುತ್ತಿತ್ತು. ಅವಕ್ಕೆ ಮಾತ್ರ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಚಾರ ಸಿಗುತ್ತಿತ್ತು. ಈಗ ಎಲ್ಲಾ ಕ್ರೀಡೆಗಳೂ ಮಾಧ್ಯಮಗಳಲ್ಲಿ ಮಾನ್ಯತೆ ಪಡೆಯುತ್ತಿವೆ, ಅಲ್ಲದೇ ಅವಕ್ಕೆ ಕವರೇಜ್ ಸಿಗುತ್ತಿದೆ. ಈ ಕ್ರೀಡೆಗಳಲ್ಲಿ ಹೊಸ ಸ್ಟಾರ್ ಆಟಗಾರರನ್ನು ಪಡೆಯುತ್ತಿದ್ದೇವೆ" ಎಂದರು. ಇದೇ ವೇಳೆ ಬುಡಾಪೆಸ್ಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಚೋಪ್ರಾ ಅವರನ್ನು ಭಾರತದ ಮಾಜಿ ನಾಯಕ ಗವಾಸ್ಕರ್ ಅಭಿನಂದಿಸಿದ್ದಾರೆ.
ಮೇರೆ ದೇಶ್ ಕಿ ಧರ್ತಿ ಸೋನಾ ಉಗ್ಲೇ: " ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದದ್ದು ನನಗೆ ನೆನಪಿದೆ, ಭಾರತ ಮತ್ತು ಇಂಗ್ಲೆಂಡ್ ನಡುವೆ ಸರಣಿ ನಡೆಯುತ್ತಿತ್ತು. ಆಗ ನಾನು ಇಂಗ್ಲೆಂಡ್‌ನಿಂದ ವೀಕ್ಷಿಸಿದ್ದೆ. ಚೋಪ್ರಾ ಚಿನ್ನದ ಪದಕವನ್ನು ಗೆದ್ದಾಗ 'ಮೇರೆ ದೇಶ್ ಕಿ ಧರ್ತಿ ಸೋನಾ ಉಗ್ಲೇ' ಎಂಬ ಹಾಡನ್ನು ಹಾಡಲು ಪ್ರಾರಂಭಿಸಿದೆ. ನಿನ್ನೆಯೂ ನನಗೆ ಹಾಗೆಯೇ ಅನಿಸಿತು. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಅವರಿಗೆ ಚಿನ್ನದ ಪದಕ ಗೆಲ್ಲುವುದು ಮುಖ್ಯವಾಗಿತ್ತು ಮತ್ತು ಅದರಲ್ಲಿ ಅವರು ಯಶಸ್ವಿಯಾದರು"ಎಂದು ಗವಾಸ್ಕರ್ ಹೇಳಿದರು.
10 ವರ್ಷಗಳಲ್ಲಿ ಭಾರತ ಕ್ರೀಡಾ ರಾಷ್ಟ್ರ ಆಗಲಿದೆ: ಇದೇ ವೇಳೆ ಬ್ಯಾಡ್ಮಿಂಟನ್ ಮತ್ತು ಚೆಸ್ನಲ್ಲಿ ಸಾಧನೆ ಮಾಡಿದ ಪ್ರಣಯ್, ಪ್ರಜ್ಞಾನಂದ ಅವರ ಬಗ್ಗೆ ಮಾತನಾಡಿದರು. "ಬ್ಯಾಡ್ಮಿಂಟನ್‌ನಲ್ಲಿ ಪ್ರಣಯ್ ಸೆಮಿಫೈನಲ್ ತಲುಪಿ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದರು. ಅಮೆರಿಕ ಮತ್ತು ಆಸ್ಟ್ರೇಲಿಯಾವನ್ನು ಕ್ರೀಡಾ ರಾಷ್ಟ್ರಗಳೆಂದು ಪರಿಗಣಿಸಿದರೆ, 10-15 ವರ್ಷಗಳಲ್ಲಿ ಭಾರತ ಕ್ರೀಡಾ ರಾಷ್ಟ್ರವಾಗಿರಲಿದೆ. ಪ್ರಜ್ಞಾನಂದ ಅವರು ರನ್ನರ್ ಅಪ್ ಆಗಿದ್ದರು. ಅವರಿಗೆ ಈಗ ಕೇವಲ 18 ವರ್ಷ ಮತ್ತು ಭವಿಷ್ಯದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆಲ್ಲಬಹುದು" ಎಂದು ಹೇಳಿದರು.
ಕ್ರಿಕೆಟ್ ಕುರಿತು ಮಾತನಾಡಿ ಅವರು, ಏಷ್ಯಾಕಪ್‌ನಲ್ಲಿ ಶ್ರೀಲಂಕಾವನ್ನು ಕಡೆಗಣಿಸುವಂತಿಲ್ಲ ಎಂದಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪೈಪೋಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಈ ಟೂರ್ನಿಯಲ್ಲಿ ಶ್ರೀಲಂಕಾ ಕೂಡ ಇದೆ ಎಂಬುದನ್ನು ಮರೆಯಬಾರದು. ಈ ಮೂರು ದೇಶಗಳ ನಡುವಿನ ಪೈಪೋಟಿ ಯಾವಾಗಲೂ ವಿಶೇಷವಾಗಿದೆ ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ: ಮೇಜರ್ ಧ್ಯಾನ್ ಚಂದ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್