ನವದೆಹಲಿ: ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಯುವ ಆಲ್ರೌಂಡರ್ ಶಿವಂ ದುಬೆ, ಹಾರ್ದಿಕ್ ಪಾಂಡ್ಯಗೆ ಪರ್ಯಾಯ. ಮುಂಬರುವ ಟಿ-20 ವಿಶ್ವಕಪ್ಗೆ ಸ್ಥಾನ ಪಡೆಯುವಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಗೊಂದಲಗಳಿವೆ. ಇನ್ನೂ ಅವರು ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಫ್ಘಾನಿಸ್ತಾನ ಸರಣಿಯಲ್ಲಿ ಶಿವಂ ದುಬೆ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರಲ್ಲಿ ಕುತೂಹಲ ಮೂಡಿಸಿದೆ. ಪಾಂಡ್ಯ ಫಿಟ್ ಆದರೂ ವಿಶ್ವಕಪ್ಗೆ ಆಯ್ಕೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಆಯ್ಕೆದಾರರಿಗೆ ಶಿವಂ ದುಬೆ ಸವಾಲಾಗಿದ್ದಾರೆ ಎಂದು ಗವಾಸ್ಕರ್ ಹೇಳಿದರು.
ಆಯ್ಕೆಗಾರರಿಗೆ ದುಬೆ ಸವಾಲು: ಹಾರ್ದಿಕ್ ಪಾಂಡ್ಯ ಸಮರ್ಥ ಆಲ್ರೌಂಡರ್. ಆದರೆ, ಸದ್ಯ ಶಿವಂ ದುಬೆ ನೀಡುತ್ತಿರುವ ಪ್ರದರ್ಶನ ಆಯ್ಕೆದಾರರ ಗಮನ ಸೆಳೆಯುವುದು ಖಂಡಿತ. ಈ ರೀತಿ ಪ್ರದರ್ಶನ ನೀಡಿದರೆ ನಿಮ್ಮನ್ನು ಹೊರಗಿಡಲು ಯಾರಿಗಾದರೂ ತುಂಬಾ ಕಷ್ಟವಾಗುತ್ತದೆ. ಇಷ್ಟಾಗಿಯೂ ಆಯ್ಕೆದಾರರು ದುಬೆಯನ್ನು ಕೈಬಿಟ್ಟರೆ ನಿಜವಾಗಿಯೂ ಕಠಿಣ ನಿರ್ಧಾರವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದುಬೆ ಹೊಸ ಆತ್ಮವಿಶ್ವಾಸದೊಂದಿಗೆ ಆಡುತ್ತಿದ್ದಾರೆ. ಸಹ ಆಟಗಾರರ ಗೌರವವನ್ನೂ ಆತ ಗಳಿಸಿದ್ದಾನೆ. ಮೈದಾನದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿರುವುದು ನೋಡಿದರೆ, ಮುಂದಿನ ದಿನಗಳಲ್ಲಿ ಆತ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾನೆ. ಜೊತೆಗೆ ಟಿ-20 ವಿಶ್ವಕಪ್ನಲ್ಲಿ ಆತ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಇನ್ನು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಟಿ20 ವಿಶ್ವಕಪ್ ತಂಡದ ಘೋಷಣೆಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ದುಬೆ ಪ್ರದರ್ಶನ ಸಂಚಲನ ಮೂಡಿಸಿದೆ. ಹಾರ್ದಿಕ್ ಫಿಟ್ ಆದ ಬಳಿಕವಾದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುಯತ್ತಾರಾ ಎಂಬುದು ಪ್ರಶ್ನೆಯಾಗಿದೆ.
ಆಫ್ಘನ್ಗಳ ಕಾಡಿದ ದುಬೆ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯ ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶಿವಂ ದುಬೆ ಅಜೇಯ 60 ರನ್ ಬಾರಿಸಿದರು. ಅಲ್ಲದೇ, ಬೌಲಿಂಗ್ನಲ್ಲಿ 1 ವಿಕೆಟ್ ಪಡೆದರು. ಇದರಿಂದ ಭಾರತ 6 ವಿಕೆಟ್ಗಳ ಗೆಲುವು ದಾಖಲಿಸಿತು. ಇಂದೋರ್‌ನಲ್ಲಿನ 2ನೇ ಪಂದ್ಯದಲ್ಲಿ ಅದೇ ಆವೇಗವನ್ನು ಮುಂದುವರೆಸಿದ ಯುವ ಆಲ್ರೌಂಡರ್, ಸ್ಫೋಟಕ ಇನ್ನಿಂಗ್ಸ್ ಆಡಿದರು. 32 ಎಸೆತಗಳಲ್ಲಿ 63 ರನ್ ಗಳಿಸಿ ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣೆ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆ ಭಾರತ-ಅಫ್ಘಾನಿಸ್ತಾನ 3ನೇ ಟಿ20 ಪಂದ್ಯ