ಅಡಿಲೇಡ್: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಭಾಗಿಯಾಗಿ ನಿಷೇಧದ ಜೊತೆಗೆ ನಾಯಕತ್ವ ಕಳೆದುಕೊಂಡಿದ್ದ ಸ್ಟೀವ್ ಸ್ಮಿತ್, ಮತ್ತೆ ತವರಿನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ಖಾಯಂ ನಾಯಕ ಪ್ಯಾಟ್ ಕಮಿನ್ಸ್ ಕೋವಿಡ್ 19 ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದ್ದ ಕಾರಣ ಅವರನ್ನು ಸೌತ್ ಆಸ್ಟ್ರೇಲಿಯಾ ಸರ್ಕಾರದ ಪ್ರೋಟೋಕಾಲ್ಗಳ ಪ್ರಕಾರ 7 ದಿನಗಳ ಕಾಲ ಐಸೊಲೇಟ್ ಮಾಡಲಾಗಿದೆ. ಹಾಗಾಗಿ ಉಪನಾಯಕನಾಗಿರುವ ಸ್ಟೀವ್ ಸ್ಮಿತ್ ಮೂರುವರೆ ವರ್ಷಗಳ ನಂತರ ಮತ್ತೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ.
ಅಡಿಲೇಡ್‌ನಲ್ಲಿ ನಡೆಯುವ ಹಗಲು - ರಾತ್ರಿ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಲು ಸಾಧ್ಯವಾಗದಿರುವುದಕ್ಕೆ ಕಮ್ಮಿನ್ಸ್ ತುಂಬಾ ನಿರಾಶೆಗೊಂಡಿದ್ದಾರೆ. ಕಮ್ಮಿನ್ಸ್ ಗೈರಿನಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಬಿಡುಗಡೆ ಮಾಡಿದೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಯಾಂಡ್ ಪೇಪರ್ ಗೇಟ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸ್ಮಿತ್ , ವಾರ್ನರ್ ಮತ್ತು ಬ್ಯಾನ್ಕ್ರಾಫ್ಟ್ ಮೂವರನ್ನು ನಿಷೇಧಗೊಳಿಸಿ, ಸ್ಮಿತ್ರನ್ನು ನಾಯಕತ್ವದಿಂದ ವಜಾಗೊಳಿಸಲಾಗಿತ್ತು. ಆದರೆ, ಈ ವರ್ಷದ ಮಾರ್ಚ್ನಲ್ಲಿ 31 ವರ್ಷದ ಬ್ಯಾಟರ್ ಮತ್ತೆ ಕಾಂಗರೂ ಪಡೆಯನ್ನು ಮುನ್ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದರಾದರೂ, ಕ್ರಿಕೆಟ್ ಆಸ್ಟ್ರೇಲಿಯಾ ಕಮಿನ್ಸ್ಗೆ ನಾಯಕತ್ವ ಪಟ್ಟ ಕಟ್ಟಿ, ಇವರನ್ನು ಉಪನಾಯಕನನ್ನಾಗಿ ನೇಮಿಸಿತ್ತು.
ಸ್ಟಿವ್ ಸ್ಮಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ವಿಕೆಟ್ ಕೀಪರ್ ಟಿಮ್ ಪೇನ್ರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ, ನಾಲ್ಕು ವರ್ಷಗಳ ಹಿಂದೆ ಮಹಿಳಾ ಸಹದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆ ತನಿಖೆ ನಡೆಯುತ್ತಿರುವುದರಿಂದ ನಾಯಕತ್ವ ತ್ಯಜಿಸಿದ್ದರು. ನಂತರ ಅನಿರ್ಧಿಷ್ಠಾವಧಿಗೆ ವಿಶ್ರಾಂತಿ ತೆಗೆದುಕೊಂಡಿದ್ದರು. ಹಾಗಾಗಿ ಪ್ಯಾಟ್ ಕಮಿನ್ಸ್ಗೆ ನಾಯಕತ್ವ ನೀಡಲಾಗಿತ್ತು.
ಇದನ್ನೂ ಓದಿ:ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಗೆದ್ದಿಲ್ಲ ಟೆಸ್ಟ್ ಸರಣಿ.. ಕೊಹ್ಲಿ ಪಡೆ ನಿರ್ಮಿಸುತ್ತಾ ಹೊಸ ಇತಿಹಾಸ?