ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ವೇಳೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಆಸ್ಟ್ರೇಲಿಯನ್ ಮಹಿಳೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪ ಕೇಳಿ ಬಂದಿದ್ದು ಗೊತ್ತೇ ಇದೆ. ಆಸ್ಟ್ರೇಲಿಯಾ ಪೊಲೀಸರು ಅವರನ್ನು ಬಂಧಿಸಿದಾಗ ಪ್ರಕರಣ ಸಂಚಲನ ಮೂಡಿಸಿತ್ತು. ಆದ್ರೂ, ಆಸ್ಟ್ರೇಲಿಯಾದ ನ್ಯಾಯಾಲಯದ ಇತ್ತೀಚೆಗಿನ ತೀರ್ಪಿನಿಂದ ಗುಣತಿಲಕಗೆ ಬಿಗ್ ರಿಲೀಫ್ ಸಿಕ್ಕಿದೆ.
ಶ್ರೀಲಂಕಾ ಕ್ರಿಕೆಟಿಗ ಗುಣತಿಲಕ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಸಿಡ್ನಿ ಪೊಲೀಸರು ಬಂಧಿಸಿದ್ದರು. ಗುಣತಿಲಕ ಕೆಲ ಸಮಯದ ಹಿಂದೆ 29 ವರ್ಷದ ಮಹಿಳೆಯನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರು. ನವೆಂಬರ್ 2 ರಂದು ರೋಸ್ ಬೇನಲ್ಲಿರುವ ಹೋಟೆಲ್ ಕೋಣೆಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ’ ಎಂದು ಪೊಲೀಸರು ಹೇಳಿದರು. ಆರಂಭದಲ್ಲಿ ಅವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿತ್ತು. ಆದರೆ, ಗುಣತಿಲಕ ತನಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ, ವಿಚಾರಣೆ ವೇಳೆ ನ್ಯಾಯಾಧೀಶರು ಎರಡು ಕಡೆಯ ವಾದ ಪ್ರತಿವಾದ ಆಲಿಸಿ ಗುಣತಿಲಕ ಪರ ತೀರ್ಪು ನೀಡಿದರು.
ಸದ್ಯ ಜಾಮೀನಿನ ಮೇಲಿರುವ ಗುಣತಿಲಕ ಖುಲಾಸೆಗೊಂಡಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. "ಎಲ್ಲದಕ್ಕೂ ತೀರ್ಪು ಉತ್ತರಿಸಿದೆ. ಇನ್ನು ಮುಂದೆ ನನ್ನ ಜೀವನವನ್ನು ಶಾಂತಿಯಿಂದ ನಡೆಸುತ್ತೇನೆ ಎಂದಿದ್ದಾರೆ.
ಓದಿ: ಲೈಂಗಿಕ ದೌರ್ಜನ್ಯದ ವೇಳೆ ಮಹಿಳೆ ಕುತ್ತಿಗೆ ಹಿಸುಕಿದ್ದ ಶ್ರೀಲಂಕಾ ಆಟಗಾರ: ಆರೋಪ
ಗುಣತಿಲಕ್ ಅಮಾನತು: ಶ್ರೀಲಂಕಾ ಪರ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಗುಣತಿಲಕ ಅವರನ್ನು ಈ ಘಟನೆಯ ನಂತರ ದೇಶದ ಕ್ರಿಕೆಟ್ ಮಂಡಳಿಯು ಅವರನ್ನು ಅಮಾನತುಗೊಳಿಸಿತ್ತು. ಕಳೆದ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ತಂಡದ ಎಲ್ಲ ಆಟಗಾರರು ದೇಶಕ್ಕೆ ವಾಪಸ್ ಆಗಿದ್ದರು. ಅಲ್ಲಿಯೇ ಉಳಿದುಕೊಂಡಿದ್ದ ಗುಣತಿಲಕ ಅವರನ್ನು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣರದಲ್ಲಿ ಬಂಧಿಸಲಾಗಿತ್ತು.
ಇದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ದನುಷ್ಕಾ ಗುಣತಿಲಕರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್ಗೆ ಗುಣತಿಲಕರನ್ನು ಪರಿಗಣಿಸುವಂತಿಲ್ಲ ಎಂದು ಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿ ಘೋಷಿಸಿದೆ.
ಶೂನ್ಯ ಸಹಿಷ್ಣುತೆ ಕಾಪಾಡಲು ಆಟಗಾರರ ನಡವಳಿಕೆ ಮುಖ್ಯ. ಕ್ರಿಕೆಟರ್ ಮೇಲಿರುವ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.