ಮುಂಬೈ: ಇದೇ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡ ಟಿ-20 ಸರಣಿಗಾಗಿ 18 ಸದಸ್ಯರ ತಂಡವನ್ನು ಘೋಷಿಸಿದೆ. ದಸುನ್ ಶನಕ ತಂಡವನ್ನು ಮುನ್ನಡೆಸಿದರೆ, ಚರಿತ್ ಅಸಲಂಕಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ಭಾನುವಾರ ಮುಗಿದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-1ರಲ್ಲಿ ಕಳೆದುಕೊಂಡಿತ್ತು. ಆದರೆ, ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ವೈಟ್ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿರುವ ಸಿಂಹಳೀಯರು ಭಾರತದ ವಿರುದ್ಧ ಗೆಲುವಿನ ಆರಂಭ ನಿರೀಕ್ಷಿಸುತ್ತಿದ್ದಾರೆ.
ಆಸೀಸ್ ಪ್ರವಾಸದಲ್ಲಿ ಕೋವಿಡ್ಗೆ ಒಳಗಾಗಿದ್ದ ವನಿಡು ಹಸರಂಗ ಮತ್ತು ಬಿನುರಾ ಫರ್ನಾಂಡೊ ತಂಡಕ್ಕೆ ವಾಪಸ್ ಆದರೆ, ಗಾಯಗೊಂಡಿರುವ ಅವಿಶ್ಕಾ ಫರ್ನಾಂಡೊ , ನುವಾನ್ ತುಷಾರ ಮತ್ತು ರಮೇಶ್ ಮೆಂಡಿಸ್ ಸರಣಿಯಿಂದ ಹೊರ ಬಿದ್ದಿದ್ದಾರೆ.
ಮುಖಾಮುಖಿ: 2007ರಿಂದ ಭಾರತ ಮತ್ತು ಶ್ರೀಲಂಕಾ ಒಟ್ಟು 8 ಸರಣಿಗಳನ್ನಾಡಿದ್ದು, ಇದರಲ್ಲಿ ಭಾರತ 6 ಮತ್ತು ಶ್ರೀಲಂಕಾ 1 ರಲ್ಲಿ ಮಾತ್ರ ಜಯ ಸಾಧಿಸಿದೆ. ಒಂದು ಸರಣಿ ಡ್ರಾಗೊಂಡಿದೆ.
ಕಳೆದ ವರ್ಷ ಭಾರತ ಬಿ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ 2-1ರಲ್ಲಿ ಭಾರತ ಸರಣಿ ಸೋತಿತ್ತು. ಒಟ್ಟಾರೆ 22 ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಭಾರತ 14 , ಶ್ರೀಲಂಕಾ 7ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.
ಶ್ರೀಲಂಕಾ ತಂಡ: ದಸುನ್ ಶನಕ(ನಾಯಕ_. ಪತುನ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಂಡಿಮಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂಡು ಹಸರಂಗ, ಚಮಿಕ ಕರುಣಾರತ್ನ, ದುಷ್ಮಂತ ಚಮೀರ, ಲಹಿರು ಕುಮಾರ, ಬಿನುರ ಫೆರ್ನಾಂಡೋ, ಶಿರಾನ್ ಫೆರ್ನಾಂಡೋ, ಮಹೀಶ್ ತೀಕ್ಷಣ, ಜೆಫ್ಫೆರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಅಶಿಯನ್ ಡೇನಿಯಲ್
ಇದನ್ನೂ ಓದಿ:ಐಸಿಸಿ ಟಿ-20 ರ್ಯಾಕಿಂಗ್ ಪಟ್ಟಿ: 6 ವರ್ಷಗಳ ಬಳಿಕ ಭಾರತಕ್ಕೆ ನಂ.1 ಸ್ಥಾನ