ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತೆ ತಂಡದಿಂದ ದೂರ ಉಳಿಯಲಿದ್ದಾರೆ. ಭಾನುವಾರ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಸುಂದರ್ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಕೋಚ್ ಟಾಮ್ ಮೋಡಿ ತಿಳಿಸಿದ್ದಾರೆ.
ಸತತ 5 ಗೆಲುವುಗಳ ನಂತರ ಹೈದರಾಬಾದ್ ಸತತ ಎರಡು ಸೋಲಿನಿಂದ ಕಂಗೆಟ್ಟಿದೆ. ಈ ಮಧ್ಯೆ ತಂಡದ ಪ್ರಮುಖ ಆಲ್ ರೌಂಡರ್ ಆಗಿರುವ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಗಾಯದಿಂದಾಗಿ ತಮಿಳುನಾಡು ಆಟಗಾರ ಈಗಾಗಲೇ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಚೇತರಿಸಿಕೊಂಡು ಎರಡು ಪಂದ್ಯಗಳನ್ನಾಡಿದ್ದ ಅವರು ಮತ್ತೆ ಗಾಯಕ್ಕೊಳಗಾಗಿರುವುದರುಂದ ಮತ್ತೆ ಕೆಲವು ದಿನಗಳ ಕಾಲ ತಂಡದಿಂದ ಹೊರಗುಳಿಯುವಂತಿದೆ.
ಭಾನುವಾರ ನಡೆದ ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸುಂದರ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುವ ಕೈಗೆ ಗಾಯಗೊಂಡಿದ್ದರಿಂದ, ಇದು ಪಂದ್ಯದಲ್ಲಿ ಸನ್ ರೈಸರ್ಸ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಕೊನೆಗೆ ಅನಿವಾರ್ಯವಾಗಿ ಪಾರ್ಟ್ ಟೈಮ್ ಸ್ಪಿನ್ನರ್ ಗಳೊಂದಿಗೆ ಬೌಲಿಂಗ್ ಮಾಡುವಂತಾಯಿತು. ಪರಿಣಾಮ ಐಡೆನ್ ಮಾರ್ಕ್ರಮ್ 3 ಓವರ್ ಬೌಲಿಂಗ್ ಮಾಡಿ 36 ರನ್ ಬಿಟ್ಟುಕೊಟ್ಟರು. ಒಂದೂ ಓವರ್ ಮಾಡದ ಸುಂದರ್ ಬ್ಯಾಟಿಂಗ್ಗೆ ಆಗಮಿಸಿದರೂ ಕೇವಲ ಎರಡು ಎಸೆತಗಳನ್ನು ಆಡಿ ಸುಂದರ್ ಪೆವಿಲಿಯನ್ ವಿಕೆಟ್ ನೀಡಿದರು.
ಈ ಹಿಂದೆ ಗಾಯವಾಗಿದ್ದ ಜಾಗದಲ್ಲೇ ಅವರಿಗೆ ಮತ್ತೆ ಗಾಯವಾಗಿದೆ ಎಂದು ಸನ್‌ರೈಸರ್ಸ್ ಕೋಚ್ ಟಾಮ್ ಮೂಡಿ ಹೇಳಿದ್ದಾರೆ. ಹಿಂದಿನ ಗಾಯದಿಂದ ಸಂಪೂರ್ಣವಾಗಿ ಸುಂದರ್ ಚೇತರಿಸಿಕೊಂಡಿದ್ದರು. ಆದರೆ ಪ್ರಸ್ತುತ ಗಾಯ ದೊಡ್ಡ ಮಟ್ಟದಲ್ಲಿ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈಗ ಆಗಿರುವ ಗಾಯಕ್ಕೆ ಹೊಲಿಗೆಯ ಅವಶ್ಯಕತೆ ಇಲ್ಲದಿರಬಹುದು. ಆದರೆ, ಬೌಲಿಂಗ್ ಮಾಡುವ ಪರಿಸ್ಥಿತಿಯಲ್ಲಿಲ್ಲ. ಅವರ ಅನುಪಸ್ಥಿತಿಯು ಅವರಿಗೆ ತುಂಬಲಾರದ ಕೊರತೆಯಾಗಿದೆ ಎಂದು ಮೂಡಿ ತಿಳಿಸಿದ್ದಾರೆ. ಸನ್ ರೈಸರ್ಸ್ ತನ್ನ ಮುಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಸುಂದರ್ ಹೊರಗುಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ:ಮಹಿಳಾ ಟಿ-20 ಟ್ರೋಫಿ: ಫೈನಲ್ ಪ್ರವೇಶಿಸಿದ ಮಹಾರಾಷ್ಟ್ರ - ರೈಲ್ವೇಸ್