ನವದೆಹಲಿ : ಸೌತಾಂಪ್ಟನ್ ವಾತಾವಾರಣ ತುಂಬಾ ಬಿಸಿಯಾಗಿರುವುದರಿಂದ ಪಿಚ್ ನಿರಂತರವಾಗಿ ಒಣಗುತ್ತಾ ಹೋಗುತ್ತದೆ. ಇದರಿಂದ ಸ್ಪಿನ್ನರ್ಗಳಿಗೆ ನೆರವಾಗುತ್ತದೆ. ಈ ಕಾರಣದಿಂದ ಕಿವೀಸ್ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ಅನುಭವಿಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ರನ್ನು ಕಣಕ್ಕಿಳಿಸಿದರೆ ಒಳಿತು ಎಂದು ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಸೌತಾಂಪ್ಟನ್ನಲ್ಲಿರುವ ಗವಾಸ್ಕರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಕಾಮೆಂಟರಿ ಪ್ಯಾನಲ್ನ ಭಾಗವಾಗಿದ್ದಾರೆ. ಜೂನ್ 18ರಂದು ನಡೆಯಲಿರುವ ಪಂದ್ಯದ ಪಿಚ್ ಮತ್ತು ಪರಿಸ್ಥಿತಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಸೌತಾಂಪ್ಟನ್ನಲ್ಲಿ ಕಳೆದ ಕೆಲವು ದಿನಗಳಿಂದ ತುಂಬಾ ಬಿಸಿಯಾದ ವಾತಾವರಣವಿದೆ. ಹಾಗಾಗಿ, ಖಂಡಿತ ಪಿಚ್ ಒಣಗುತ್ತದೆ. ಇದರಿಂದ ಪಂದ್ಯ ಶುರುವಾಗುತ್ತಿದಂತೆ ಸ್ಪಿನ್ನರ್ಗಳಿಗೆ ನೆರವಾಗುತ್ತದೆ. ಆದ್ದರಿಂದ ಅಶ್ವಿನ್ ಮತ್ತು ಜಡೇಜಾ ಇಬ್ಬರನ್ನು ಆಡಿಸಬೇಕು ಎಂದು ಗವಾಸ್ಕರ್ ಪಿಟಿಐಗೆ ನೀಡಿದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ಅವರಿಬ್ಬರು ಬೌಲಿಂಗ್ ಸಮತೋಲನದ ಜೊತೆಗೆ ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸುತ್ತಾರೆ. ನಂತರ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿ ಕೂಡ ವಾತಾವರಣ ಮತ್ತು ಪಿಚ್ ಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕಿವೀಸ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವುದರಿಂದ ಭಾರತಕ್ಕೆ ಹಿನ್ನಡೆಯಾಗಲಿದೆ ಎಂಬ ವಾದವನ್ನು ಗವಾಸ್ಕರ್ ತಳ್ಳಿ ಹಾಕಿದ್ದಾರೆ.
ಈ ಪ್ರವಾಸ ಟೆಸ್ಟ್ ಸರಣಿಯಾರಂಭಕ್ಕೂ ಮುನ್ನ ಒಂದೆರಡು ಅಭ್ಯಾಸಪಂದ್ಯಗಳ ಅಗತ್ಯವಿತ್ತು. ಆದರೆ, ಭಾರತ ತಂಡ ಇಂಟ್ರಾಸ್ಕ್ವಾಡ್ ಪಂದ್ಯವನ್ನಾಡಿದೆ. ಅದೇ ಅವರಿಗೆ ಅಭ್ಯಾಸದಂತೆ. ಅಲ್ಲದೆ ತಂಡ ಯುವಕರ ಮತ್ತು ಅನುಭವಿಗಳ ಮಿಶ್ರಿತ ತಂಡವಾಗಿದೆ. ಅಲ್ಲದೆ ಕೆಲವು ಕ್ರಿಕೆಟಿಗರು ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವುದರಿಂದ ಅಲ್ಲಿನ ಪರಿಸ್ಥಿತಿ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನು ಅರಿತಿದಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ತಿಳಿಸಿದ್ದಾರೆ.
ಇದನ್ನು ಓದಿ: ಪೂಜಾರರ ಅರ್ಧದಷ್ಟು ಸಾಧನೆ ಮಾಡದವರೂ ಆತನ ಬ್ಯಾಟಿಂಗ್ ಟೀಕಿಸುತ್ತಿದ್ದಾರೆ : ಸಚಿನ್ ಕಿಡಿ