ಕೇಪ್ಟೌನ್( ದಕ್ಷಿಣ ಆಫ್ರಿಕಾ): ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾದ ಚಾಣಾಕ್ಷ್ಯ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ 2018ರಲ್ಲಿ ವಿದಾಯ ಘೋಷಣೆ ಮಾಡಿದ್ದಾರೆ. ಆದರೆ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗೆ ಮರಳಲಿದ್ದಾರೆಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದೀಗ ಇದಕ್ಕೆ ಮತ್ತಷ್ಟು ಪುಷ್ಠಿ ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯಲ್ಲಿ ಎಬಿಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದು, ಇದರ ಮಧ್ಯೆ ಎಬಿಡಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ಗೆ ಮರಳಲಿದ್ದಾರೆಂಬ ಮಾಹಿತಿಯನ್ನ ದಕ್ಷಿಣ ಆಫ್ರಿಕಾದ ಕೋಚ್ ಮಾರ್ಕ್ ಬೌಚರ್ ಹೊರಹಾಕಿದ್ದಾರೆ.
ಎಬಿಡಿ ಭಾರತಕ್ಕೆ ತೆರಳುವ ಮೊದಲು ಇದೇ ವಿಷಯವಾಗಿ ಸಂಭಾಷಣೆ ನಡೆಸಿರುವುದಾಗಿ ಮಾರ್ಕ್ ಬೌಚರ್ ಬಹಿರಂಗಪಡಿಸಿದ್ದಾರೆ.
ಮಾರ್ಕ್ ಬೌಚರ್ ಹೇಳಿದ್ದೇನು!?
ಎಬಿಡಿ ಐಪಿಎಲ್ಗೆ ಹೋಗುವ ಮೊದಲು ನಾನು ಅವರೊಂದಿಗೆ ಸಂಭಾಷಣೆ ನಡೆಸಿದ್ದೇನೆ. ಸಂಭಾಷಣೆ ತುಂಬಾ ಮುಕ್ತವಾಗಿ ನಡೆದಿದೆ ಎಂದು ದಕ್ಷಿಣ ಆಫ್ರಿಕಾ ಕೋಚ್ ಹೇಳಿದ್ದಾರೆ.ಎಬಿಡಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಅವರು ಅತ್ಯಂತ ಪ್ರಮುಖ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬೌಚರ್ ತಿಳಿಸಿದ್ದಾರೆ. ಜತೆಗೆ ನೀವು ಹೋಗಿ ನಿಮ್ಮ ಕೆಲಸ ಮಾಡಿ, ಟೂರ್ನಿ ಮುಕ್ತಾಯದ ಬಳಿಕ ನಿಮ್ಮ ಜೊತೆ ಇದರೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 114 ಟೆಸ್ಟ್, 228 ಏಕದಿನ ಹಾಗೂ 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಸದ್ಯ ಭಾರತದಲ್ಲಿ ಐಪಿಎಲ್ ನಡೆಯುತ್ತಿರುವುದು ಅನೇಕ ವಿದೇಶಿ ಪ್ಲೇಯರ್ಸ್ಗಳಿಗೆ ಅನುಕೂಲವಾಗಿದೆ. ಇದಕ್ಕೆ ಕಾರಣವಾಗಿ ಈ ವರ್ಷದ ಕೊನೆಯಲ್ಲಿ ಭಾರತದಲ್ಲೇ ಟಿ-20 ವಿಶ್ವಕಪ್ ಆಯೋಜನೆಗೊಂಡಿರುವುದು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಮರಳಿ ಸೇರ್ಪಡೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ.
ಈ ಹಿಂದೆ ಬಿಗ್ಬ್ಯಾಶ್ ಟೂರ್ನಿಯಲ್ಲಿ ಭಾಗಿಯಾಗಿದ್ದ ವೇಳೆ ಸಹ ಖುದ್ದಾಗಿ ಎಬಿ ಡಿವಿಲಿಯರ್ಸ್ ಇದೇ ವಿಚಾರವಾಗಿ ಸುಳಿವು ನೀಡಿದ್ದರು. ಎಲ್ಲವೂ ಅಂದುಕೊಂಡಿರುವ ಹಾಗೇ ನಡದರೆ ಟಿ20 ವಿಶ್ವಕಪ್ ವೇಳೆಗೆ ಎಬಿಡಿ ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳಲಿದ್ದಾರೆ.