ಜೋಹಾನ್ಸ್ಬರ್ಗ್: ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಐಪಿಎಲ್ನಲ್ಲಿ ಆಡಬೇಕಿರುವ ಆಟಗಾರರನ್ನು ಸೇರಿಸಿರುವುದರಿಂದ ಫ್ರಾಂಚೈಸಿಗಳು ಲೀಗ್ನ ಕೆಲವು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರ ಸೇವೆ ಕಳೆದುಕೊಳ್ಳಲಿವೆ.
ಮಾರ್ಚ್ 18ರಂದು ಏಕದಿನ ಸರಣಿ ಆರಂಭವಾಗಲಿದ್ದು, 23ರಂದು ಅಂತ್ಯಗೊಳ್ಳಲಿದೆ. ಐಪಿಎಲ್ ಮಾರ್ಚ್ 26ರಂದು ಉದ್ಘಾಟನೆಯಾಗಲಿದೆ. ಹಾಗಾಗಿ ಬಿಸಿಸಿಐ ಕೋವಿಡ್ 19 ಪ್ರೋಟೋಕಾಲ್ಗಳ ಪ್ರಕಾರ ಈ ಬಯೋಬಬಲ್ ಸೇರುವ ಮುನ್ನ 3 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಬೇಕಿರುವುದರಿಂದ ಈ ಸರಣಿಯಲ್ಲಿ ಆಡುವ ಕೆಲವು ಆಟಗಾರರು ಆರಂಭದ ಕೆಲವು ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ.
ಐಪಿಎಲ್ನ ಭಾಗವಾಗಿರುವ 8 ಆಟಗಾರರು ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಕಗಿಸೊ ರಬಾಡ, ಲುಂಗಿ ಎಂಗಿಡಿ, ರಾಸಿ ವ್ಯಾನ್ ಡರ್ ಡಸೆನ್ , ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಮ್, ಡ್ವೇನ್ ಪ್ರಿಟೋರಿಯಸ್ ಮತ್ತು ಮಾರ್ಕೊ ಜಾನ್ಸನ್ 16ರ ಬಳಗದಲ್ಲಿದ್ದಾರೆ.
ಸೀಮಿತ ಓವರ್ಗಳ ಸರಣಿ ನಂತರ ಟೆಸ್ಟ್ ಸರಣಿ ನಡೆಯಲಿದ್ದು, ಇದು ಐಪಿಎಲ್ ವೇಳಾಪಟ್ಟಿಯ ಜೊತೆಗೆ ಘರ್ಷಣೆಯನ್ನುಂಟು ಮಾಡಲಿದೆ. ಮಾರ್ಚ್ 31ರಿಂದ ಏಪ್ರಿಲ್ 12ರವರೆಗೆ ಈ ಸರಣಿ ನಡೆಯಲಿದೆ.
ಆದರೆ ಸಿಎಸ್ಎ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಟೆಸ್ಟ್ ಸರಣಿ ಮತ್ತು ಐಪಿಎಲ್, ಯಾವುದರಲ್ಲಿ ಆಡಬೇಕೆಂಬ ಆಯ್ಕೆಯನ್ನು ಆಟಗಾರರಿಗೆ ಬಿಡಲಾಗಿದೆ. ಆದರೆ ನಾಯಕ ಡೀನ್ ಎಲ್ಗರ್ ಕ್ರಿಕೆಟಿಗರ ವೇದಿಕೆ ಕಲ್ಪಿಸಿಕೊಟ್ಟಿರುವ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಿಕೊಂಡು ತಮ್ಮ ನಿಷ್ಠೆ ತೋರಿಸಬೇಕು ಎಂದು ತಮ್ಮ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಏಕದಿನ ಸರಣಿಯಲ್ಲಿ ಪಾಲ್ಗೊಂಡು, ಟೆಸ್ಟ್ ಕ್ರಿಕೆಟ್ ಆಡದ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲು ಹೋಗಬಹುದು. ಮುಂದಿನ ಒಂದೆರಡು ದಿನಗಳಲ್ಲಿ ಟೆಸ್ಟ್ ತಂಡದ ಭಾಗವಾಗಿರುವ 6 ಆಟಗಾರರ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ ಎಂದು ಸಿಎಸ್ಎ ಆಯ್ಕೆ ಸಮಿತಿ ಸದಸ್ಯರೊಬ್ಬರು ಇಎಸ್ಪಿನ್ಗೆ ಮಾಹಿತಿ ನೀಡಿದ್ದಾರೆ.
ರಬಾಡ, ಎಂಗಿಡಿ, ವ್ಯಾನ್ ಡರ್ ಡಸೆನ್,ಮಾರ್ಕ್ರಮ್, ಜಾನ್ಸನ್ ಮತ್ತು ನಾರ್ಕಿಯ ದಕ್ಷಿಣ ಆಫ್ರಿಕಾದ ಟೆಸ್ಟ್ ಯೋಜನೆಯಲ್ಲಿದ್ದಾರೆ. ಈ ಆಟಗಾರರು ಒಂದು ವೇಳೆ ಟೆಸ್ಟ್ ಆಡುವುದಕ್ಕೆ ಬಯಸಿದರೆ, ಐಪಿಎಲ್ನ ಬಹುಪಾಲು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಆಡುವ ಆಸೆ ಮುಗಿದಿದೆ, ದೇಶಿ ಕ್ರಿಕೆಟ್ನಲ್ಲಿ ಯುವಕರ ಸ್ಥಾನ ಆಕ್ರಮಿಸಲಾರೆ: ನಿವೃತ್ತಿ ಸುಳಿವು ಕೊಟ್ಟ ಫಿಂಚ್