ಮುಂಬೈ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಮಾತ್ರವಲ್ಲದೆ, ಮೈದಾನದಿಂದ ಹೊರಗೂ ಸುದ್ದಿಯಾಗುತ್ತಿದ್ದಾರೆ. ಬಹುಭಾಷಾ ನಟ ಸೋನು ಸೂದ್ ಅವರ ಕಿರಿ ಮಗ ಅಯಾನ್ಗೆ ಶಮಿ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸೋನು ಸೂದ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಸೋನು ಸೂದ್ ಅವರ ಮಗ ಕ್ರಿಕೆಟ್‌ನಲ್ಲಿ ವಿಶೇಶ ಆಸಕ್ತಿ ಹೊಂದಿದ್ದು, ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಶಮಿ ಆವರಿಂದ ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ವೇಗದ ಬೌಲಿಂಗ್ನಲ್ಲಿ ಹೇಗೆ ಬ್ಯಾಟ್ ಬೀಸಬೇಕು ಎಂಬುದನ್ನು ಅವರು ತಿಳಿದುಕೊಂಡರು. ನನ್ನ ಮಗನಿಗೆ ಶಮಿ ಮಾರ್ಗದರ್ಶನ ನೀಡಿದ್ದಾರೆ. ಇದಕ್ಕಾಗಿ ಶಮಿ ಮತ್ತು ತರುಬೇತುದಾರ ದೇವೇಶ್ ಉಪಾಧ್ಯಾಯ ಅವರಿಗೆ ಧನ್ಯವಾದಗಳು ಎಂದು ಬರೆದಿರುವ ಸೂದ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆ ಸೋನು ಸೂದ್ ಕೂಡ ಇಂದು (ಭಾನುವಾರ) ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಬಗ್ಗೆ ಉತ್ಸುಕರಾಗಿದ್ದಾರೆ.
'ಶ್ರೀಮಂತ' ಎಂಬ ಕನ್ನಡ ಚಿತ್ರದಲ್ಲೂ ಇವರು ನಟಿಸಿದ್ದರು. ಇದೀಗ ತಮ್ಮ ಮುಂಬರುವ ಹಿಂದಿ ಚಲನಚಿತ್ರ 'ಫತೇಹ್' ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾವನ್ನು ತಮ್ಮದೇ ನಿರ್ಮಾಣ ಸಂಸ್ಥೆಯಾದ ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಜೀ ಸ್ಟುಡಿಯೋಸ್ ಸಹಯೋಗದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ನಟಿಸಿದ್ದಾರೆ.
2023ರ ವಿಶ್ವಕಪ್ ಆರಂಭಿಕ ಪಂದ್ಯಗಳಿಂದ ಬೆಂಚ್ ಕಾಯ್ದುಕೊಂಡಿದ್ದ ಮೊಹಮ್ಮದ್ ಶಮಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರನಡೆದ ನಂತರ ತಂಡದಲ್ಲಿ ಸ್ಥಾನ ಪಡೆದರು. ಬಳಿಕ ಶಮಿ ಅವರನ್ನು ತಂಡ ಕೈಬಿಡುವ ಬಗ್ಗೆ ಕೋಚ್ ಮತ್ತು ನಾಯಕ ನಿರ್ಧಾರ ತೆಗೆದುಕೊಳ್ಳದಿರುವಂಥ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಬೆಂಕಿಯುಂಡೆಯಂಥ ಪ್ರಖರ ಬೌಲಿಂಗ್‌ಗೆ ವಿಶ್ವದ ಟಾಪ್ ಬ್ಯಾಟರ್‌ಗಳು ಸದ್ದು ಮಾಡದೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ.
ಇದನ್ನೂ ಓದಿ: ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಬರಬೇಕಾದ ದಾಖಲೆಗಳಿವು...