ಆಂಟಿಗುವಾ: 19ವರ್ಷದೊಳಗಿನ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನಾಯಕ ಯಶ್ ಧುಳ್ ಶತಕದ ನೆರವಿನಿಂದ ಆಸ್ಟ್ರೇಲಿಯಾವನ್ನು 96 ರನ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಅಂಡರ್19 ವಿಶ್ವಕಪ್‌ನಲ್ಲಿ ಭಾರತ ಸತತ 4ನೇ ಭಾರಿ ಫೈನಲ್ ಪ್ರವೇಶಿಸಿದೆ.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶತಕ ಗಳಿಸಿದ ಭಾರತ ತಂಡದ ನಾಯಕರ ಪಟ್ಟಿಯಲ್ಲಿ ಯಶ್ ಧುಳ್ ಮೂರನೆಯವರಾಗಿದ್ದಾರೆ. 2008ರಲ್ಲಿ ವಿರಾಟ್ ಕೊಹ್ಲಿ ಹಾಗೂ 2012ರಲ್ಲಿ ಉನ್ಮುಕ್ತ್ ಚಾಂದ್ ಈ ಸಾಧನೆ ಮಾಡಿದ್ದವರು. ಈವರೆಲ್ಲರೂ ದೆಹಲಿ ಮೂಲದವರೇ ಎಂಬುದು ಮತ್ತೊಂದು ವಿಶೇಷವಾಗಿದೆ.
ನಾಯಕ ಯಶ್ ಧುಳ್ ನಿನ್ನೆಯ ಪಂದ್ಯದಲ್ಲಿ 110 ಎಸೆತಗಳಿಂದ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 110 ರನ್ ಸಿಡಿಸಿದರು. ಧುಳ್‌ಗೆ ಸಾಥ್ ನೀಡಿದ ಉಪ ನಾಯಕ ಶೇಕ್ ರಶೀದ್ 108 ಎಸೆತಗಳಿಂದ 94 ರನ್ ಗಳಿದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಒಟ್ಟಾರೆಯಾಗಿ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿತು.
291 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್‌ಗೆ ಟೀಂ ಇಂಡಿಯಾದ ಯಂಗ್ ಬೌಲರ್ಸ್ ಮಾರಕವಾದರು. ಉತ್ತಮ ಬೌಲಿಂಗ್ ದಾಳಿಯಿಂದಾಗಿ 41.5 ಓವರ್‌ಗಳನ್ನು ಇಡೀ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಲಚ್ಲಾನ್ ಶಾ 51 ರನ್ ಹೊರತುಪಡಿಸಿದರೆ ಯಾವೊಬ್ಬ ಆಟಗಾರನೂ ಆಸ್ಟ್ರೇಲಿಯಾ ಪರ ತಂಡಕ್ಕೆ ನೆರವಾಗಲಿಲ್ಲ. ಭಾರತ ಪರ ವಿಕ್ಕಿ ಓಸ್ಟಾಲ್ 3, ನಿಶಾಂತ್ ಸಿಂಧು ಹಾಗೂ ರವಿ ಕುಮಾರ ತಲಾ 2 ಪಡೆದರು. ಕೌಶಾಲ್ ತಾಂಬೆ ಹಾಗೂ ರಘುವಂಶಿ ತಲಾ 1 ವಿಕೆಟ್ ಕಿತ್ತರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ಯಶ್, ಕೊನೆಯ ವರೆಗೆ ಬ್ಯಾಟಿಂಗ್ ಮಾಡುವ ಯೋಜನೆಯನ್ನು ನಾನು ಮತ್ತು ರಶೀದ್ ರೂಪಿಸಿದ್ದೆವು. ಇದು ವರ್ಕೌಟ್ ಆಗಿದೆ. ನಾಯಕನಾಗಿ ಶತಕ ಗಳಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಸ್ಥಿರವಾಗಿ ಬ್ಯಾಟಿಂಗ್ ಕಾಯ್ದುಕೊಂಡು, ಹೆಚ್ಚು ಶಾಟ್‌ಗಳನ್ನು ಹೊಡೆಯುವ ಪ್ರಯತ್ನ ಮಾಡಬಾರದೆಂಬ ಐಡಿಯಾ ಹಾಕಿಕೊಳ್ಳಲಾಗಿತ್ತು. 40ನೇ ಓವರ್ ಬಳಿಕ ವೇಗದ ಬ್ಯಾಟಿಂಗ್ ಮಾಡಲಾಯಿತು. ನನ್ನ ಮತ್ತು ರಶೀದ್ ಬ್ಯಾಟಿಂಗ್ ಕಾಂಬಿನೇಷನ್ ತುಂಬಾ ಚೆನ್ನಾಗಿ ಇತ್ತು ಎಂದು ಸಂತಸ ಹಂಚಿಕೊಂಡಿದ್ದಾರೆ. ನಾಲ್ಕು ಭಾರಿ ಚಾಂಪಿಯನ್ ಆಗಿರುವ ಭಾರತ ತಂಡ ಇದೇ ಶನಿವಾರ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯ ಆಡಲಿದೆ.