ಲೀಡ್ಸ್ : ವೇಗಿ ಮೊಹಮ್ಮದ್ ಸಿರಾಜ್ ಅವರ ಬೆಳವಣಿಗೆ ತಮಗೆ ಹೆಚ್ಚೇನು ಆಶ್ಚರ್ಯ ತಂದಿಲ್ಲ. ಯಾಕೆಂದರೆ, ಅವರು ಇಂದು ಯಾವುದೇ ಹಂತದಲ್ಲಾದರೂ ವಿಶ್ವದ ಯಾವುದೇ ಬ್ಯಾಟ್ಸ್ಮನ್ ವಿಕೆಟ್ ಪಡೆಯುವ ಮಟ್ಟಕ್ಕೆ ತಮ್ಮ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
27 ವರ್ಷದ ಹೈದರಾಬಾದ್ ಬೌಲರ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಅವರ ಜೊತೆಗೆ ಭಾರತದ ಅತ್ಯುತ್ತಮ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ.
ಅವರ ಪರಿಪೂರ್ಣ ಲೈನ್ ಮತ್ತು ಲೆಂತ್ ತವರಿನ ಬ್ಯಾಟ್ಸ್ಮನ್ಗಳನ್ನು ಸಮಸ್ಯೆಗೀಡು ಮಾಡುತ್ತಿದೆ. ಅವರು 11 ವಿಕೆಟ್ಗಳಲ್ಲಿ 8 ವಿಕೆಟ್ ಭಾರತ 151 ರನ್ಗಳ ಜಯ ಸಾಧಿಸಿದ ಲಾರ್ಡ್ಸ್ ಟೆಸ್ಟ್ನಲ್ಲಿ ಬಂದಿವೆ.
ತಂದೆಯ ಸಾವಿನ ನಡುವೆಯೂ ಕೈಗೊಂಡಿದ್ದ ಆಸ್ಟ್ರೇಲಿಯಾ ಪ್ರವಾಸ ಅವನಲ್ಲಿ ಆತ್ಮವಿಶ್ವಾಸವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ಟೀಂ ಇಂಡಿಯಾ ನಾಯಕ ಶ್ಲಾಘಿಸಿದ್ದಾರೆ.
ಆತನ ಬೆಳೆವಣಿಗೆ ಬಗ್ಗೆ ನಾನು ಆಶ್ಚರ್ಯಗೊಂಡಿಲ್ಲ. ಯಾಕೆಂದರೆ, ನಾನು ಆತನನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಆತ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ. ಆ ಕೌಶಲ್ಯಗಳನ್ನು ಬೆಂಬಲಿಸಿಲು ನಿಮಗೆ ಆತ್ಮವಿಶ್ವಾಸ ಅಗತ್ಯವಿರುತ್ತದೆ. ಆಸ್ಟ್ರೇಲಿಯಾ ಪ್ರವಾಸ ಆತನಿಗೆ ಆ ಉತ್ತೇಜನ ಮತ್ತು ಆತ್ಮವಿಶ್ವಾಸವನ್ನು ಒದಗಿಸಿದೆ ಎಂದು 3ನೇ ಟೆಸ್ಟ್ಗೂ ಮುನ್ನ ನಡೆದ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದಾರೆ.
ಸಿರಾಜ್ ಯಾವುದೇ ಹಂತದಲ್ಲಿ ಯಾವುದೇ ಬ್ಯಾಟ್ಸ್ಮನ್ರನ್ನು ಔಟ್ ಮಾಡಬಲ್ಲೆ ಎಂಬುದನ್ನು ತಿಳಿದುಕೊಂಡು ಮುನ್ನುಗ್ಗುತ್ತಿದ್ದಾನೆ. ಅವನ ಆಟದ ಮೇಲಿನ ನಂಬಿಕೆ ಮತ್ತೊಂದು ಹಂತಕ್ಕೆ ತಲುಪಿದೆ. ಆತನ ಆಟದ ಫಲಿತಾಂಶಗಳನ್ನು ನೀವು ಮುಂದಿನ ದಿನಗಳಲ್ಲಿ ನೋಡುತ್ತೀರಿ ಎಂದು ಕೊಹ್ಲಿ ತಿಳಿಸಿದ್ದಾರೆ.
ಇದನ್ನು ಓದಿ: IND vs ENG: 53 ವರ್ಷಗಳಿಂದ ಸೋಲೇ ಕಾಣದ ಲೀಡ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಗೆಲುವಿನ ಕನಸು