ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆರಂಭಿಕನಾಗಿ ಶುಬ್ಮನ್ ಗಿಲ್ ವೈಫಲ್ಯ ಅನುಭವಿಸುವುದಕ್ಕೆ ಆತನ ಮೇಲಿನ ನಿರೀಕ್ಷೆಯ ಒತ್ತಡವೇ ಕಾರಣ ಎಂದು ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
2020ರಲ್ಲಿ ಗಿಲ್ 14 ಪಂದ್ಯಗಳಲ್ಲಿ 33.84ರ ಸರಾಸರಿಯಲ್ಲಿ 440 ರನ್ಗಳಿಸಿದ್ದರು. ಆದರೆ 14ನೇ ಆವೃತ್ತಿಯಲ್ಲಿ ಅವರು 7 ಪಂದ್ಯಗಳನ್ನಾಡಿದರೂ ಒಂದು ಅರ್ಧಶತಕ ಸಿಡಿಸಲಾಗದೇ ವೈಫಲ್ಯ ಅನುಭವಿಸಿದ್ದರು. ಆದರೆ ಗವಾಸ್ಕರ್ ಪ್ರಕಾರ- ಗಿಲ್ ಕೇವಲ 21 ವರ್ಷದ ಹುಡುಗ, ಆತ ವಿಶ್ರಾಂತಿ ಪಡೆದು ತನ್ನ ವೈಫಲ್ಯಗಳಿಂದ ಕಲಿಯುವುದನ್ನು ರೂಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
"ಶುಬ್ಮನ್ ಗಿಲ್ ಬಗ್ಗೆ ನನಗನ್ನಿಸುವುದೇನೆಂದರೆ, ಅವನ ಮೇಲಿನ ನಿರೀಕ್ಷೆಯ ಒತ್ತಡ ಅವನನ್ನು ಕಟ್ಟಿಹಾಕುತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಹಿಂದಿನ ಸನ್ನಿವೇಶ ವಿಭಿನ್ನವಾಗಿತ್ತು. ಆಗ ಆತ ಭರವಸೆಯ ಹೊಸ ಆಟಗಾರನಾಗಿದ್ದ. ಆದರೆ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನದ ನಂತರ ಆತನ ಮೇಲಿನ ರನ್ ಗಳಿಸುವ ನಿರೀಕ್ಷೆ ಹೆಚ್ಚಾಗಿದೆ. ಆದೇ ಅವನನ್ನು ಈಗ ಕುಸಿಯುವಂತೆ ಮಾಡುತ್ತಿದೆ." ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
"ಆತನಿಗೆ ಕೇವಲ ವಿಶ್ರಾಂತಿಯ ಅಗತ್ಯವಿದೆ. ಅವನು ಕೇವಲ 21 ವರ್ಷದ ಹುಡುಗ. ವೈಫಲ್ಯಗಳು ಬರುತ್ತಿರುತ್ತವೆ ಮತ್ತು ಆ ವೈಫಲ್ಯಗಳಿಂದಲೇ ಆತ ಕಲಿಯಬೇಕಾಗಿದೆ. ಆತ ತನ್ನ ಮೇಲಿನ ನಿರೀಕ್ಷೆಗಳ ಬಗ್ಗೆ ಆಲೋಚಿಸದೆ ಮುಕ್ತವಾಗಿ ಆಡಬೇಕು. ಅವನು ಸ್ವಾಭಾವಿಕ ಆಟ ಆಡಿದರೆ ರನ್‌ಗಳು ಸುಲಭವಾಗಿ ಬರುತ್ತವೆ. ಪ್ರತಿ ಎಸೆತಗಳಲ್ಲೂ ರನ್ ಗಳಿಸಬೇಕೆಂಬ ನಿರೀಕ್ಷೆಯ ಒತ್ತಡದಿಂದಲೇ ಆತ ಔಟ್ ಆಗುತ್ತಿದ್ದಾನೆ." ಎಂದು ಗವಾಸ್ಕರ್ ಹೇಳಿದ್ದಾರೆ.
ಇದನ್ನು ಓದಿ: ಬುಮ್ರಾ 400 ಟೆಸ್ಟ್ ವಿಕೆಟ್ ಪಡೆಯಬಲ್ಲರು; ಕರ್ಟ್ಲೀ ಆ್ಯಂಬ್ರೋಸ್