ಕಾನ್ಪುರ : ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಂಬೈನ ಯುವ ಬ್ಯಾಟರ್ ಶ್ರೇಯಸ್ ಪದಾರ್ಪಣೆ ಮಾಡಲಿದ್ದಾರೆ ಎಂದು ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬುಧವಾರ ಖಚಿತಪಡಿಸಿದ್ದಾರೆ.
ಕಾನ್ಪುರದಲ್ಲಿ ನಡೆಯುವ ಮೊದಲ ಪಂದ್ಯಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ರಹಾನೆ, ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಭಾರತ ತಂಡ ಈಗಾಗಲೇ ಕಿವೀಸ್ ವಿರುದ್ಧ ಟಿ20 ಸರಣಿಯನ್ನು 3-0ಯಲ್ಲಿ ಗೆದ್ದ ವಿಶ್ವಾಸದಲ್ಲಿ ಬೀಗುತ್ತಿದೆ. ಆದರೆ, ಟಾಪ್ ಬ್ಯಾಟರ್ ಕೆಎಲ್ ರಾಹುಲ್ ಗಾಯದಿಂದ 2 ಪಂದ್ಯಗಳ ಸರಣಿಯಿಂದ ಹೊರ ಬಿದ್ದಿದ್ದಾರೆ.
ಹಾಗಾಗಿ, ಭಾರತ ತಂಡ ಅಗ್ರ ಮೂರು ಬ್ಯಾಟರ್ಗಳಾದ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲಸದ ಹೊರೆಯ ನಿರ್ವಹಣೆಗಾಗಿ ಕೊಹ್ಲಿ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರೆ, ರೋಹಿತ್ 2 ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ.
ಇವರಿಬ್ಬರ ಜೊತೆಗೆ ವಿಕೆಟ್ ಕೀಪರ್ ರಿಷಭ್ ಪಂತ್, ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಕೂಡ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ, ಕೋಚ್ ರಾಹುಲ್ ದ್ರಾವಿಡ್ ಯಾವ ರೀತಿಯ ಸಂಯೋಜನೆಯನ್ನು ಹೊಂದಲಿದ್ದಾರೆ ಎನ್ನುವುದು ಭಾರಿ ಕುತೂಹಲಕಾರಿಯಾಗಿದೆ. ಸ್ಪಿನ್ ಸ್ಟಾರ್ಗಳಾದ ಆರ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಲಭ್ಯರಿರುವುದು ತಂಡಕ್ಕೆ ಬಲ ತಂದಿದೆ.
ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಂಡದ ವೇಗಿಗಳ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಮಯಾಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಆರಂಭಿಕರಾದರೆ, ಪೂಜಾರ, ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ವೃದ್ದಿಮಾನ್ ಸಹಾ ವಿಕೆಟ್ ಕೀಪರ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇದನ್ನು ಓದಿ:ಲಯಕ್ಕೆ ಮರಳಲು ರಹಾನೆಗೆ ಒಂದು ಇನ್ನಿಂಗ್ಸ್ ಸಾಕು: ಪೂಜಾರ ವಿಶ್ವಾಸ