ಧರ್ಮಶಾಲಾ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಸತತ 3 ಅರ್ಧಶತಕ ಸೇರಿದಂತೆ 204ರನ್ಗಳಿಸಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ಶ್ರೀಲಂಕಾ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಹಾಗಾಗಿ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಯ್ಯರ್, ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಅವರೂ ಶ್ರೀಲಂಕಾ ವಿರುದ್ಧದ ಮೂರು ಟಿ-20 ಪಂದ್ಯಗಳಲ್ಲೂ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ನಂತರ ಸರಣಿಯ ಎಲ್ಲ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಈ ಟಿ-20 ಸರಣಿಯಲ್ಲಿ ಅಯ್ಯರ್ ಕ್ರಮವಾಗಿ 57, 74 ಮತ್ತು 73 ರನ್ಗಳಿಸಿದ್ದರು. ವಿಶೇಷವೆಂದರೆ ಈ ಮೂರು ಪಂದ್ಯಗಳಲ್ಲೂ ಅವರು ಅಜೇಯರಾಗುಳಿದರು. ಅವರು ಒಟ್ಟು 204 ರನ್ ಗಳಿಸುವ ಮೂಲಕ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರಲ್ಲದೇ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದರು. ಕೊಹ್ಲಿ 2016ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಮವಾಗಿ 3 ಅರ್ಧಶತಕಗಳ ಸಹಿತ 199 ರನ್ ಸಿಡಿಸಿದ್ದರು.
ಆದರೆ, ಮೂರು ಪಂದ್ಯಗಳ ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿದ ವಿಶ್ವದಾಖಲೆ ನ್ಯೂಜಿಲ್ಯಾಂಡ್ನ ಕಾಲಿನ್ ಮನ್ರೋ ಹೆಸರಿನಲ್ಲಿದೆ. ಕಿವೀಸ್ ಬ್ಯಾಟರ್ 2017-18ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 1 ಶತಕ ಮತ್ತು 2 ಅರ್ಧಶತಕಗಳ ಸಹಿತ 223 ರನ್ಗಳಿಸಿದ್ದರು.
3 ಪಂದ್ಯಗಳ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಗಳು
- ಕಾಲಿನ್ ಮನ್ರೋ -223 ರನ್
- ಡೇವಿಡ್ ವಾರ್ನರ್-217 ರನ್
- ಹಜರುತ್ತುಲ್ಲಾ ಝಾಜೈ-204 ರನ್
- ಶ್ರೇಯಸ್ ಅಯ್ಯರ್-204 ರನ್
- ಮೊಹಮ್ಮದ್ ರಿಜ್ವಾನ್-203 ರನ್
- ವಿರಾಟ್ ಕೊಹ್ಲಿ-199ರನ್
ಇದನ್ನೂ ಓದಿ:ಅಯ್ಯರ್ ಹ್ಯಾಟ್ರಿಕ್ ಫಿಫ್ಟಿ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಸಾಧಿಸಿದ ರೋಹಿತ್ ಪಡೆ