ಕಟಕ್: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲೂ ಭಾರತ ಸೋಲನುಭವಿಸಿದ್ದು, ಕ್ರೀಡಾಭಿಮಾನಿಗಳ ಆಸೆಗೆ ಮತ್ತೆ ನಿರಾಸೆ ತಂದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ಗಳ ಸಾಧರಣ ಮೊತ್ತ ಕಲೆ ಹಾಕಿತ್ತು. ಈ ಅಲ್ಪ ಮೊತ್ತ ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ ಕೇವಲ 18.2 ಓವರ್ಗಳಲ್ಲಿ 149 ರನ್ ಮಾಡಿ ನಿರಾಯಾಸ ಗೆಲುವು ಸಾಧಿಸಿತು. ಆದರೆ, ವಿಧಿಲಿಖಿತ ಎಂಬಂತೆ ಕ್ರೀಡಾಂಗಣದಲ್ಲಿ ತಾವು ತೆಗೆದುಕೊಂಡಿದ್ದ ಕೆಲವು ನಿರ್ಧಾರಗಳು ಕೈಕೊಟ್ಟಿದ್ದು ಅಗ್ರ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರಣಿ ಸೋಲು ಹಾಗೂ ಈ ಟಿ-20 ಪಂದ್ಯದಲ್ಲಿ ಬದಲಾದ ದಿಢೀರ್ ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್‌ಗೂ ಮುನ್ನ ಅಕ್ಷರ್ ಪಟೇಲ್ ಅವರನ್ನು ಬಾಟಿಂಗ್ ಮಾಡಲು ಕಳಿಸಲು ಕಾರಣವೇನು ಅನ್ನೋದನ್ನು ಬಹಿರಂಗಪಡಿಸಿದ್ದಾರೆ. ಇದು ಅವರನ್ನು (ದಿನೇಶ್ ಕಾರ್ತಿಕ್) ಬಿಟ್ಟು ಇವರನ್ನು (ಅಕ್ಷರ್ ಪಟೇಲ್) ಕಳಿಸಿದ್ದು ವಿಚಿತ್ರವಾಗಿ ಕಾಣಿಸಬಹುದು. ಆದರೆ, ಸಿಂಗಲ್ಸ್ ಹಾಗೂ ಡಬಲ್ಸ್ ರೊಟೇಟ್ ಮಾಡಬೇಕಾದ ಸನ್ನಿವೇಶ ಇದ್ದುದ್ದರಿಂದ ದಿನೇಶ್ ಕಾರ್ತಿಕ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಬೇಗ ಕ್ರೀಸ್‌ಗೆ ಕಳುಹಿಸಲಾಗಿತ್ತು.
ಇದು ಮೊದಲೇ ತೆಗೆದುಕೊಂಡ ನಿರ್ಧಾರ: ಕಾರಣ ಇದು ನಾವು ಮೊದಲೇ ತೆಗೆದುಕೊಂಡಿದ್ದ ನಿರ್ಧಾರವಾಗಿತ್ತು. 6-7 ಓವರ್‌ಗಳು ಬಾಕಿ ಇದ್ದಾಗ ಸಿಂಗಲ್ಸ್ ಹಾಗೂ ಡಬಲ್ಸ್ ಮೂಲಕ ಸ್ಟ್ರೈಕ್ ರೊಟೇಟ್ ಮಾಡಬೇಕಾದ ಆಟಗಾರನ ಅಗತ್ಯವಿತ್ತು. ಆ ವೇಳೆ ಬೌಂಡರಿಯಾಗಲಿ ಅಥವಾ ಚೆಂಡನ್ನು ಕ್ರೀಸ್ನಿಂದ ಹೊರಗಟ್ಟುವ ದಾಂಡಿಗ ಆಗಲಿ ಆಗ ಅಗತ್ಯವಿರಲಿಲ್ಲ. ಸಿಂಗಲ್ ಗಳಿಸಿ ತಂಡಕ್ಕೆ ಆಸರೆಯಾದರೆ ಸಾಕು ಎಂಬುವುದಾಗಿತ್ತು. ಈ ಹಿನ್ನೆಲೆ ಅಕ್ಷರ್ ಪಟೇಲ್ ಅವರನ್ನು ಬೇಗ ಬ್ಯಾಟಿಂಗ್‌ಗೆ ಇಳಿಸಲಾಗಿತ್ತು ಎಂದು ಶ್ರೇಯಸ್ ಅಯ್ಯರ್ ತಾವು ತೆಗೆದುಕೊಂಡ ನಿರ್ಧಾರ ಬಗ್ಗೆ ಸ್ಪಷ್ಟನೆ ನೀಡಿದರು.
ಆರಂಭಿಕ ಆಟಗಾರರ ವಿಫಲ ಪ್ರಯತ್ನದಿಂದ ಭಾರತ ರನ್ ಗಳಿಸಲು ಹೆಣಗಾಡುತ್ತಿತ್ತು. ಅಕ್ಸರ್ ಕ್ರೀಸ್‌ಗೆ ಬಂದಾಗ ಇನ್ನು ಏಳು ಓವರ್‌ಗಳು ಉಳಿದಿದ್ದವು. 17ನೇ ಓವರ್‌ನಲ್ಲಿ ಅವರು ಔಟಾದರು. ಆಗ ಕೇವಲ 112 ರನ್ ಗಳಿಸಿದ್ದ ಭಾರತ 6 ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ತಂಡಕ್ಕೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಆಸರೆಗಾಲಿದ್ದಾರೆ ಎಂಬ ಕಾರಣದಿಂದ ಅವರನ್ನು ಕಳುಹಿಸಲಾಯಿತು. ತಂಡದ ನಿರ್ಧಾರನ್ನು ಹುಸಿಗೊಳಿಸದ ದಿನೇಶ್ ಕಾರ್ತಿಕ್ ಈ ಕೆಲಸವನ್ನು ಅಚ್ಚುಕಟ್ಟಾಗಿಯೂ ನಿರ್ವಹಿಸಿದರು. ಆದರೆ, ಈ ಎಲ್ಲ ನಿರ್ಧಾರಗಳ ಹೊರತಾಗಿಯೂ ಟೀಂ ಇಂಡಿಯಾ ಸೋಲನುಭವಿಸಬೇಕಾಯಿತು.
6ನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ ಆಡಿದ 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ದಿನೇಶ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಎದುರಿಸಿದ ಕೇವಲ 21 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 30 ರನ್ ಸಿಡಿಸಿದರು ಎಂದು ಶ್ರೇಯಸ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ ಕೇವಲ 148 ರನ್ ಕಲೆ ಹಾಕಲು ಶಕ್ತವಾಯಿತು. ಈ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಗೆಲುವು ಪಡೆಯಿತು.
ಅಂದಹಾಗೆ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 12.4 ಓವರ್‌ಗಳಿಗೆ 90 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಂದಿನಂತೆ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಆಗಮಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಈ ವೇಳೆ ಅಕ್ಷರ್ ಪಟೇಲ್ ಕ್ರೀಸ್ ಬರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ಇದನ್ನು ಓದಿ:ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ರಜೆಯ ಮಜೆ ಸವಿಯುತ್ತಿರುವ ವಿರಾಟ್ ಕೊಹ್ಲಿ!