ಮುಂಬರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ (ಡಬ್ಲ್ಯುಸಿಪಿಎಲ್) ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರವಾಗಿ ಶ್ರೇಯಾಂಕಾ ಪಾಟೀಲ್ ಭಾಗವಹಿಸಲಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿದೆ. ಈ ಪಂದ್ಯವಳಿಯಲ್ಲಿ ಭಾಗವಹಿಸುವ ಮೂಲಕ ವಿದೇಶಿ ಲೀಗ್‌ನಲ್ಲಿ ಆಡಿದ ಮೊದಲ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆಯುತ್ತಾರೆ.
ಇತ್ತೀಚೆಗೆ ನಡೆದ ಮಹಿಳೆಯರ ಏಷ್ಯಾಕಪ್ನಲ್ಲಿ ಆಲ್ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಈ ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವುಮೆನ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನಲ್ಲೂ ಆಡಿದ್ದರು. ಡಬ್ಲ್ಯೂಪಿಎಲ್ನಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು.
ವಿದೇಶಿ ಲೀಗ್‌ನಲ್ಲಿ ಆಡಲು ಬಿಸಿಸಿಐ ಒಪ್ಪಿಗೆ: ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಅವರಂತಹ ಅಗ್ರ ಆಟಗಾರರು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ವುಮೆನ್ ಬಿಗ್ ಬ್ಯಾಷ್ ಲೀಗ್ ಮತ್ತು ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್‌ನಲ್ಲಿ ಆಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ 7 ಪಂದ್ಯಗಳನ್ನು ಆಡಿಸಲಾಗುತ್ತಿದ್ದು, 11 ದಿನಗಳ ಕಾಲ ಲೀಗ್ ನಡೆಯಲಿದೆ, ಇದರ ವೇಳಾ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.
ಆರ್‌ಸಿಬಿ ಪರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಸರು ಮಾಡಿದ್ದ ಶ್ರೇಯಾಂಕಾ, ಸೀನಿಯರ್ ಅಂತಾರಾಷ್ಟ್ರೀಯ ತಂಡದಲ್ಲಿ ಪದಾರ್ಪಣೆ ಮಾಡದೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಹಾಂಕಾಂಗ್‌ನಲ್ಲಿ ನಡೆದ ಮಹಿಳೆಯರ ಉದಯೋನ್ಮುಖ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಾರತ ಎ ತಂಡಕ್ಕಾಗಿ ಆಡಿದ್ದು, ಎರಡು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಾರ್ಬಡೋಸ್ ರಾಯಲ್ಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ಡಬ್ಲ್ಯುಸಿಪಿಎಲ್ 2023 ರ ಋತುವಿನಲ್ಲಿ ಆಡುತ್ತಿರುವ ಮೂರು ತಂಡಗಳಾಗಿವೆ. ಡಬ್ಲ್ಯುಸಿಪಿಎಲ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ತಂಡದ ಆಟಗಾರರು ಭಾಗವಹಿಸುತ್ತಾರೆ. ಡಿಯಾಂಡ್ರಾ ಡಾಟಿನ್, ಹೇಲಿ ಮ್ಯಾಥ್ಯೂಸ್ ಮತ್ತು ಸ್ಟಾಫನಿ ಟೇಲರ್ ಈಗಾಗಲೇ ಒಪ್ಪಂದದಲ್ಲಿರುವ ಆಟಗಾರ್ತಿಯರು.
ವೆಸ್ಟ್ ಇಂಡೀಸ್‌ನ ಮಾಜಿ ನಾಯಕಿ ಸ್ಟಾಫಾನಿ ಟೇಲರ್ ನೇತೃತ್ವದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತನ್ನ ಮೊದಲ WCPL ಪಂದ್ಯವನ್ನು ಬಾರ್ಬಡೋಸ್ ರಾಯಲ್ಸ್ ವುಮೆನ್ ವಿರುದ್ಧ ಸೆಪ್ಟೆಂಬರ್ 1 ರಂದು ತಮ್ಮ ತವರು ನೆಲವಾದ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆಡಲಿದೆ. ಎರಡನೇ ಪಂದ್ಯವನ್ನು ಹಾಲಿ ಚಾಂಪಿಯನ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ಸೆಪ್ಟೆಂಬರ್ 3 ರಂದು ಆಡಲಿದ್ದಾರೆ.
ಇದನ್ನೂ ಓದಿ: Dream11: 3 ವರ್ಷದಕ್ಕೆ ಬಿಸಿಸಿಐನ ಪ್ರಮುಖ ಪ್ರಾಯೋಜಕರಾದ ಡ್ರೀಮ್ 11.. ವೆಸ್ಟ್ ಇಂಡೀಸ್ ಪ್ರವಾಸದಿಂದ ಪಾಲುದಾರಿಕೆ ಆರಂಭ