ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಪಾಕಿಸ್ತಾನದ ಬೌಲರ್ಗಳನ್ನು ಚೆಂಡಾಡಿ ಅಮೋಘ ಜಯ ತಂದುಕೊಟ್ಟರು. ಇದನ್ನು ವಿಶ್ವ ಕ್ರಿಕೆಟ್ ಹಾಡಿ ಹೊಗಳಿದೆ. ಅಷ್ಟೇಕೆ? ಪಾಕ್ ಕ್ರಿಕೆಟಿಗರು ಕೂಡ ಚೇಸ್ ಮಾಸ್ಟರ್ ಆಟಕ್ಕೆ ಬೆರಗಾಗಿದ್ದಾರೆ.
ಪಾಕಿಸ್ತಾನ ಮಾಜಿ ದೈತ್ಯ ವೇಗಿ ಶೋಯೆಬ್ ಅಖ್ತರ್ ಕೂಡ ವಿರಾಟ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ಯೂಟ್ಯೂಬ್ ಚಾನಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಿರಾಟ್ ವೃತ್ತಿಜೀವನದ ಅತಿದೊಡ್ಡ ಇನಿಂಗ್ಸ್ ಇದಾಗಿದೆ. ಪಾಕಿಸ್ತಾನ ಮತ್ತು ಭಾರತ ಪಂದ್ಯದಿಂದಲೇ ನಿಜವಾದ ವಿಶ್ವಕಪ್ ಆರಂಭವಾಗಿದೆ. ಇನ್ನೂ ಮುಂದೆ ದೊಡ್ಡ ಪಂದ್ಯಗಳಿವೆ. ಭಾರತ ಪಾಕಿಸ್ತಾನ ಮತ್ತೆ ಎದುರಾಗಲಿವೆ ಎಂದು ಭವಿಷ್ಯ ನುಡಿದರು.
ವಿರಾಟ್ ನಿವೃತ್ತಿ ಬಗ್ಗೆ ಮಾತು: ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಗುಣಗಾನ ಮಾಡಿದ ಶೋಯೆಬ್ ಅಖ್ತರ್ ಬಳಿಕ ಟಿ20 ಮಾದರಿಯಿಂದ ವಿರಾಟ್ ಕೊಹ್ಲಿ ನಿವೃತ್ತಿ ಪಡೆಯಬೇಕು ಎಂದು ಪುನರುಚ್ಚರಿಸಿದ್ದಾರೆ. ಇದಕ್ಕೂ ಮೊದಲು ಅವರು ಕೊಹ್ಲಿ ಚುಟುಕು ಕ್ರಿಕೆಟ್ನಿಂದ ದೂರ ಸರಿಯಬೇಕು ಎಂದಿದ್ದರು.
ವಿರಾಟ್ ಕೊಹ್ಲಿ ಟಿ20 ಯಲ್ಲಿ ಬಳಸುವ ಶಕ್ತಿಯನ್ನು ಏಕದಿನ ಮಾದರಿಯಲ್ಲಿ ತೋರಿಸಲಿ. ಅವರ ಬ್ಯಾಟ್ನಿಂದ ಇನ್ನಷ್ಟು ಶತಕಗಳು ಹರಿದು ಬರಲಿ. ಟಿ20 ಗೆ ವಿರಾಟ್ ಶೀಘ್ರವೇ ನಿವೃತ್ತಿ ಹೇಳಲಿ ಎಂದು ಅಚ್ಚರಿ ಮೂಡಿಸಿದರು. ಪಾಕ್ ವಿರುದ್ಧದ ಟಿ20 ಪಂದ್ಯದಲ್ಲಿ ಹಿರಿಯ ಆಟಗಾರ, ಕಿರಿಯರು ನಾಚುವ ಹಾಗೇ ಬ್ಯಾಟ್ ಬೀಸಿದ್ದರೂ ಪಾಕ್ ವೇಗಿಯ ಈ ಹೇಳಿಕೆ ಅಚ್ಚರಿ ಉಂಟು ಮಾಡಿದೆ.
ಪಾಕ್ ತಂಡದ ಬೆನ್ನು ತಟ್ಟಿದ ಶೋಯೆಬ್: ಪಂದ್ಯದಲ್ಲಿ ಸೋಲು ಅನುಭವಿಸಿದರೂ ಉತ್ತಮವಾಗಿ ಆಟವಾಡಿದಿರಿ. ಎದೆಗುಂದಬೇಡಿ, ಮುಂದಿನ ಪಂದ್ಯಗಳ ಬಗ್ಗೆ ಗಮನಹರಿಸಿ. ಉತ್ತಮ ಆಟವಾಡಿ ಸೆಮಿಫೈನಲ್ ತಲುಪಿ ಮತ್ತೊಮ್ಮೆ ಭಾರತ ಜೊತೆ ಸೆಣಸಾಡಿ ಎಂದು ಸಲಹೆ ನೀಡಿದರು.
"ವಿಶ್ವಕಪ್ ಈಗಷ್ಟೇ ಪ್ರಾರಂಭವಾಗಿದೆ. ಭಾರತ- ಪಾಕಿಸ್ತಾನ ಆಡಿದಾಗ ಮಾತ್ರ ವಿಶ್ವಕಪ್ ನಿಜವಾಗಿಯೂ ಚಾಲನೆ ಪಡೆಯಲಿದೆ. ಎರಡು ತಂಡಗಳು ಮತ್ತೆ ಮುಖಾಮುಖಿಯಾಗುತ್ತವೆ. ಇದು ಖಂಡಿತ" ಎಂದು ಅಖ್ತರ್ ಹೇಳಿದರು.
ಇದನ್ನೂ ಓದಿ: 18 ಎಸೆತಗಳಲ್ಲಿ ದಾಖಲೆಯ 58 ರನ್ ಸಿಡಿಸಿದ ಸ್ಟೊಯಿನಿಸ್! ಶ್ರೀಲಂಕಾ ವಿರುದ್ಧ ಆಸೀಸ್‌ಗೆ ಗೆಲುವು