ಕೊಲಂಬೊ: ಭಾರತ ತಂಡ ಸೀಮಿತ ಓವರ್ಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಆದರೆ ಈ ಪ್ರವಾಸಕ್ಕೆ ಕೋವಿಡ್ ಕಾರಣದಿಂದ ಬರೋಬ್ಬರಿ 20 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸರಣಿ ಆರಂಭಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಆದರೆ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್ಮನ್ ಯಾರಾಗ್ತಾರೆ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಅನುಭವದ ಆಧಾರ ಮೇಲೆ ಪರಿಗಣಿಸಿದರೆ ನಾಯಕ ಶಿಖರ್ ಧವನ್ ಜೊತೆಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಬ್ಯಾಟ್ಸ್ಮನ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಪೃಥ್ವಿ ಶಾ ಭಾರತ ತಂಡದಿಂದ ಹೊರಬಿದ್ದ ಮೇಲೆ ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಂಡು ದೇಶಿ ಕ್ರಿಕೆಟ್ನಲ್ಲಿ ಭರ್ಜರಿ ರನ್ಗಳಿಸಿದ್ದಾರೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ 800+ ರನ್ ಬಾರಿಸುವುದರ ಜೊತೆಗೆ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಇನ್ನು ಐಪಿಎಲ್ನಲ್ಲೂ ಡೆಲ್ಲಿ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿರುವಂತೆ ಮಾಡಿದ್ದಾರೆ. ಈ ಎಲ್ಲ ದಾಖಲೆಗಳ ನೆರವಿನಿಂದ ಲಂಕಾ ಪ್ರವಾಸದಲ್ಲಿ ಶಿಖರ್ ಧವನ್ ಜೊತೆಗೆ ಆರಂಭಿಕರಾಗುವುದಕ್ಕೆ ಶಾ ಮೊದಲ ಆಯ್ಕೆ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನು ಕರ್ನಾಟಕದ ಯುವ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಇಲ್ಲ ಎನ್ನುವುದನ್ನು ಬಿಟ್ಟರೆ ದೇಶಿ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಪೃಥ್ವಿ ಶಾಗೆ ಸರಿದೂಗುವಂತೆ ಆಡಿದ್ದಾರೆ. ಸ್ಥಿರತೆಯಲ್ಲೂ ಕೂಡ ಶಾ ಅವರಿಗಿಂತಲೂ ಒಂದು ಕೈ ಮೇಲೆಂದರೆ ತಪ್ಪೇನಿಲ್ಲ. ಆದರೆ ದೇವದತ್ ಎಡಗೈ ಆರಂಭಿಕನಾಗಿರುವುದರಿಂದ ಪೃಥ್ವಿಗೆ ಹೆಚ್ಚಿನ ಅವಕಾಶವಿದೆ. ಒಂದು ವೇಳೆ ಮೊದಲೆರಡು ಪಂದ್ಯಗಳಲ್ಲಿ ಭಾರತ ಗೆದ್ದರೆ ದೇವದತ್ಗೆ ಪದಾರ್ಪಣೆ ಭಾಗ್ಯ ಸಿಗಲಿದೆ.
ಇನ್ನು ಮಹಾರಾಷ್ಟ್ರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಋತುರಾಜ್ ಗಾಯಕ್ವಾಡ್ ಮತ್ತು ದೆಹಲಿ ಮೂಲದ ಕೆಕೆಆರ್ ತಂಡದಲ್ಲಿ ಇನ್ನಿಂಗ್ಸ್ ಆರಂಭಿಸಿರುವ ಅನುಭವಿ ನಿತೀಶ್ ರಾಣಾ ಕೂಡ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಐದು ಮಂದಿ ಆರಂಭಿಕರಿರುವುದರಿಂದ ದ್ರಾವಿಡ್ ಕೋಚಿಂಗ್ನಲ್ಲಿ ಎಷ್ಟು ಮಂದಿಗೆ ಅವಕಾಶ ಸಿಗಬಹುದು ಎಂದು ಕಾದುನೋಡಬೇಕಿದೆ.
ಜುಲೈ 18, 20 ಮತ್ತು 23 ರಂದು ಏಕದಿನ ಪಂದ್ಯ ಮತ್ತು ಜುಲೈ 25, 27 ಮತ್ತು 29ರಂದು ಟಿ20 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: EXCLUSIVE : ಸಂಜು ಸಾಮ್ಸನ್ ಗೆಲುವು ತಂದುಕೊಡಬಲ್ಲ ಆಟಗಾರ.. ಆದರೆ, ಸ್ಥಿರತೆ ಮುಖ್ಯ ಅಂತಾರೆ ಅಗರ್ಕರ್..