ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಮುಂದಿನ ಕೆಲ ದಿನಗಳಲ್ಲಿ ಟೀಂ ಇಂಡಿಯಾ ಘೋಷಣೆಯಾಗಲಿದೆ. 50 ಓವರ್ಗಳ ಕ್ರಿಕೆಟ್ ಟೂರ್ನಿಗೆ ನಾಯಕತ್ವದ ಜವಾಬ್ದಾರಿ ಶಿಖರ್ ಧವನ್ ಹೆಗಲಿಗೆ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳಿಂದು ತಿಳಿದುಬಂದಿದೆ.
ರೋಹಿತ್ ಶರ್ಮಾ ಸೇರಿದಂತೆ ಕೆಲ ಪ್ಲೇಯರ್ಸ್ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ. ಹೀಗಾಗಿ, ಕೆಲ ಪ್ರಮುಖ ಪ್ಲೇಯರ್ಸ್ಗೆ ಬಿಡುವು ನೀಡಲು ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಿರ್ಧರಿಸಿದೆ.
ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಬ್ರೇಕ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೋಸ್ಕರ ವಿವಿಎಸ್ ಲಕ್ಷಣ್ ಕೋಚ್ ಆಗಿ ಸೇವೆ ಸಲ್ಲಿಸಲಿರುವರು. ಹರಿಣಗಳ ವಿರುದ್ಧ ಟೀಂ ಇಂಡಿಯಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಸೆಪ್ಟೆಂಬರ್ 28 ರಿಂದ ಸರಣಿ ಪ್ರಾರಂಭಗೊಳ್ಳಲಿದೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್ನಲ್ಲಿ ಗಬ್ಬರ್ ಸಿಂಗ್ ದಾಖಲೆ: ಈ ಸಾಧನೆ ಮಾಡಿದ 10ನೇ ಭಾರತೀಯ
ಟಿ20 ಪಂದ್ಯಗಳು ಕ್ರಮವಾಗಿ ತಿರುವನಂತಪುರಂ, ಗುವಾಹಟಿ ಹಾಗೂ ಇಂದೋರ್ನಲ್ಲಿ ನಡೆಯಲಿವೆ. ಅಕ್ಟೋಬರ್ 6ರಿಂದ ಏಕದಿನ ಪಂದ್ಯಗಳ ಸರಣಿ ಶುರುವಾಗಲಿದ್ದು, ರಾಂಚಿ ಹಾಗೂ ದೆಹಲಿಯಲ್ಲಿ ಆಯೋಜನೆಗೊಂಡಿವೆ. ಕಳೆದ ಕೆಲ ವಾರಗಳ ಹಿಂದೆ ಜಿಂಬಾಬ್ವೆ ವಿರುದ್ಧ ನಡೆದ ಸರಣಿಯಲ್ಲೂ ತಂಡವನ್ನು ಎಡಗೈ ಬ್ಯಾಟರ್ ಶಿಖರ್ ಧವನ್ ಮುನ್ನಡೆಸಿದ್ದರು. ಭಾರತ ಈ ಸರಣಿಯನ್ನು 3-0 ಅಂತರದಿಂದ ಕೈವಶ ಮಾಡಿಕೊಂಡಿತ್ತು.