ನವದೆಹಲಿ: ವಿಕೆಟ್ ಕೀಪರ್ ಬ್ಯಾಟರ್ ಸಂಜು ಸಾಮ್ಸನ್ ಅವರನ್ನು ದೀರ್ಘಕಾಲಿಕ ನಾಯಕನಾಗಿ ಪರಿಗಣಿಸಿರುವುದರಿಂದ ಮೊದಲ ಆದ್ಯತೆಯ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ರಿಟೈನ್ ಮಾಡಿದೆ. ಅವರ ಆಯ್ಕೆಯ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿಲ್ಲ ಎಂದು ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಾಕ್ಕರ ಹೇಳಿದ್ದಾರೆ.
2022ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಭಾರತೀಯ ಆಟಗಾರರಲ್ಲಿ ನಾಯಕ ಸಂಜು ಸಾಮ್ಸನ್ ಮತ್ತು ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ವಿದೇಶಿ ಆಟಗಾರರ ವಿಭಾಗದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಶ್ ಬಟ್ಲರ್ರನ್ನು ರಿಟೈನ್ ಮಾಡಿಕೊಂಡಿದೆ. ಸಾಮ್ಸನ್ 14, ಬಟ್ಲರ್ 10 ಮತ್ತು ಜೈಸ್ವಾಲ್ 4 ಕೋಟಿ ರೂಗಳನ್ನು ಪಡೆದುಕೊಂಡಿದ್ದಾರೆ.
ನಾವು ಹೊಸದಾಗಿ ರೂಪುಗೊಂಡಿರುವ ದತ್ತಾಂಶ ವಿಶ್ಲೇಷಣಾ ತಂಡದೊಂದಿಗೆ ಸಾಕಷ್ಟು ಚರ್ಚೆ ಮಾಡಿ, ಭಾರತ ಮತ್ತು ಯುಎಸ್ನ ನಮ್ಮ ಪಾಲುದಾರರ ಸಲಹೆಯೊಂದಿಗೆ ಈ ಮೂರು ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದೇವೆ. ಸಂಜು ಸಾಮ್ಸನ್ ನಮ್ಮ ತಂಡದ ನಾಯಕ ಮತ್ತು ಅವರು ನಮ್ಮ ನಂಬರ್ 1 ಆಯ್ಕೆಯಾಗಿದ್ದರು. ಇದರಲ್ಲಿ ಹೆಚ್ಚೇನು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಂಗಾಕ್ಕರ ಆರ್ಆರ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಅವರೊಬ್ಬ ಅದ್ಬುತ ಆಟಗಾರ
ಅವರ(ಸಾಮ್ಸನ್) ರಾಜಸ್ಥಾನ್ ರಾಯಲ್ಸ್ಗೆ ದೀರ್ಘಕಾಲದ ನಾಯಕನಾಗಲಿದ್ದಾರೆ. ಅವರೊಬ್ಬ ಅದ್ಭುತ ಆಟಗಾರ, ಅದನ್ನ ಸಮಯ ಸಿಕ್ಕಾಗಲೆಲ್ಲಾ ಅವರು ತೋರಿಸಿದ್ದಾರೆ. ಅವರು ಆರ್ಆರ್ಗೆ ಅಮೂಲ್ಯವಾದ ಆಸ್ತಿ ಎಂದಿದ್ದಾರೆ.
ನಾವು 19 ವರ್ಷದ ಯಶಸ್ವಿ ಜೈಸ್ವಾಲ್ ಅವರನ್ನು ರಿಟೈನ್ ಮಾಡಿಕೊಂಡಿದ್ದೇವೆ. ಅವರೊಬ್ಬ ಯುವ ಆರಂಭಿಕ ಬ್ಯಾಟರ್, ಅವರು ಭವಿಷ್ಯದ ಸ್ಟಾರ್. ಹಿಂದಿನ ಆವೃತ್ತಿಯಲ್ಲಿ ಉತ್ತಮವಾಗಿ ಆಡಿದ್ದಾರೆ. ಜೊತೆಗೆ ಅತ್ಯಂತ ಪ್ರತಿಭಾವಂತ. ಅವನು ಬಹಳ ಬೇಗನೆ ಕಲಿಯುವವನು, ಅವನು ಕಠಿಣ ಪರಿಶ್ರಮಿ, ಹಾಗಾಗಿ ಅವನು ನಮ್ಮ ಅನ್ಕ್ಯಾಪಡ್ ರಿಟೆನ್ಷೆನ್ ಆಗಿದ್ದಾರೆ.
ವಿದೇಶಿ ಆಟಗಾರನ ವಿಭಾಗದಲ್ಲಿ ನಾವು ಜೋಶ್ ಬಟ್ಲರ್ ಆಯ್ಕೆ ಮಾಡಿದ್ದೇವೆ. ಅವರೊಬ್ಬ ಅಸಾಧಾರಣ ಆಟಗಾರ, ಅವರು ಏನು ಮಾಡಬಲ್ಲರು ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಮಧ್ಯಮ ಕ್ರಮಾಂಕವಾಗಬಹುದು ಅಥವಾ ಅಗ್ರ ಕ್ರಮಾಂಕವಾಗಬಹುದು ಆತ ಎಲ್ಲಿ ಬೇಕಾದರೂ ಆಡಬಲ್ಲ, ಅವರೊಬ್ಬ ಮ್ಯಾಚ್ ವಿನ್ನರ್ ಎಂದು ಶ್ರೀಲಂಕಾ ಮಾಜಿ ನಾಯಕ ತಮ್ಮ ರಿಟೆನ್ಷನ್ಅನ್ನು ಸಮರ್ಥಿಸಿಕೊಂಡಿದ್ದಾರೆ.
ಪರ್ಸ್ ಮತ್ತು ಮುಂದಿನ ಹರಾಜನ್ನು ಪರಿಗಣಿಸಿ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ರನ್ನು ರಿಟೈನ್ ಮಾಡಿಕೊಳ್ಳಲಿಲ್ಲ ಎಂದು ಸಂಗಾಕ್ಕರ ಹೇಳಿದ್ದಾರೆ.