ನವದೆಹಲಿ: ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಮಗೆ ಬೆದರಿಕೆಯೊಡ್ಡಿದ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಾನವೀಯತೆಯ ದೃಷ್ಟಿಯಿಂದ ತಮಗೆ ಬೆದರಿಕೆಯಾಕಿರುವ ಪತ್ರಕರ್ತನ ಹೆಸರನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
"ನನಗೆ ನೋವಾಗಿದೆ ಮತ್ತು ಮನನೊಂದಿದ್ದೇನೆ. ನಾನು ಅಂತಹ ನಡವಳಿಕೆ ಸಹಿಸಬಾರದು ಎಂದು ನಾನು ಭಾವಿಸಿದೆ. ಯಾರೇ ಆದರೂ ಈ ರೀತಿ ಬೆದರಿಸುವ ಮೂಲಕ ಕಾರ್ಯಸಾಧನೆಗೆ ಮುಂದಾಗಬಾರದು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾನು ಆ ಸಂದೇಶಗಳನ್ನು ಸಾರ್ಜಜನಿಕರ ಮುಂದೆ ತರಲು ಬಯಸಿದೆನೇ ಹೊರತು ಆತನ/ಅವಳ ಹೆಸರನ್ನು ಅಲ್ಲ ಎಂದು ಸಹಾ ಮೊದಲ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಯಾರೊಬ್ಬರ ವೃತ್ತಿಜೀವನವನ್ನು ಕೊನೆಗೊಳಿಸುವ ಮಟ್ಟಿಗೆ ನಾನು ಯಾರಿಗೂ ಹಾನಿಯನ್ನುಂಟುಮಾಡುವುದಿಲ್ಲ, ಅದು ನನ್ನ ಸ್ವಭಾವವಲ್ಲ. ಆದ್ದರಿಂದ ಅವನ / ಅವಳ ಕುಟುಂಬವನ್ನು ನೋಡಿಕೊಂಡು ಮಾನವೀಯತೆಯ ಆಧಾರದ ಮೇಲೆ, ನಾನು ಸದ್ಯಕ್ಕೆ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಅಂತಹ ಯಾವುದೇ ವರ್ತನೆ ಪುನಃ ಸಂಭವಿಸಿದರೆ, ನಾನು ಯಾವುದನ್ನು ಮುಚ್ಚಿಡಲು ಹೋಗುವುದಿಲ್ಲ" ಎಂದು ಮತ್ತೊಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು ನನ್ನ ಸಮಸ್ಯೆಗೆ ತಕ್ಷಣ ಬೆಂಬಲವನ್ನು ತೋರಿಸಿದ ಮತ್ತು ಸಹಾಯ ಮಾಡಲು ಇಚ್ಛೆ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರಿಗೆ ನನ್ನ ಕೃತಜ್ಞತೆಗಳು" ಎಂದು ಕೊನೆಯ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಸಹಾ ಅವರನ್ನು ಕೈಬಿಡಲಾಗಿತ್ತು. ಈ ವೇಳೆ ಸಂದರ್ಶನಕ್ಕಾಗಿ ಪತ್ರಕರ್ತರೊಬ್ಬರು ಸಹಾ ಅವರನ್ನು ಒತ್ತಾಯ ಮಾಡಿದ್ದರು. ಇದಕ್ಕೆ ಒಪ್ಪದಿದ್ದಾಗ ಅವರು ಕೆಲವು ಬೆದರಿಸುವಂತಹ ಸಂದೇಶಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದನ್ನು ಸಹಾ ಟ್ವೀಟ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ಸಹಾಗೆ ಬೆದರಿಕೆ ಖಂಡನೀಯ, ಆದಷ್ಟು ಬೇಗ ಆ ಪತ್ರಕರ್ತನ ವಿರುದ್ಧ ಕ್ರಮ ತೆಗೆದುಕೊಳ್ಳಲಿ: ಕ್ರಿಕೆಟಿಗರ ಸಂಘ ಒತ್ತಾಯ